ರಬತ್: ಮಧ್ಯ ಮೊರಾಕೊದಲ್ಲಿ ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 2000ಕ್ಕೆ ಏರಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ.
800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ. ಅವಶೇಷಗಳಡಿ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿಗಳು ಎದುರಾಗಿವೆ. ಹೀಗಾಗಿ ಮೊರಾಕೊದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
45 ಲಕ್ಷ ಜನರು ನೆಲೆಸಿರುವ ಮೊರಾಕ್ಕೊದ ವಾಣಿಜ್ಯ ನಗರ ಮ್ಯಾರಕೇಶ್ ನಿಂದ ದಕ್ಷಿಣ ದಿಕ್ಕಿಗೆ 70 ಕಿ.ಮೀ. ದೂರದಲ್ಲಿರುವ ಅಲ್ ಸೌತ್ ಪ್ರಾಂತ್ಯದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಮೇಲಿನಿಂದ 18 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.
ಗಾಯಾಳುಗಳನ್ನು ಸಾಗಣೆ ಮಾಡುವುದಕ್ಕೆ ಆಂಬುಲೆನ್ಸ್ ಸಂಚರಿಸುವುದಕ್ಕೂ ಆಗದಷ್ಟು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದು, ರಕ್ಷಣಾ ತಂಡಗಳು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ವರದಿಯಾಗಿದೆ. .