ಜೆರೇಸಲೇಂ: ಇಸ್ರೇಲ್ ಹಮಾಸ್ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಗಾಜಾದ ವೆಸ್ಟ್ ಬ್ಯಾಂಕ್ನ ಜೆನಿನ್ ನಗರದಲ್ಲಿರುವ ಅಲ್-ಅನ್ಸಾರ್ ಮಸೀದಿ ಸಂಕೀರ್ಣದಲ್ಲಿರುವ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಮೇಲೆ ಇಸ್ರೇಲಿ ಸೇನೆ ವೈಮಾನಿಕ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಇದಕ್ಕೂ ಮುನ್ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದರು.
ಹಮಾಸ್ ಹೋರಾಟಗಾರರು ಮಸೀದಿಯನ್ನು ಕಮಾಂಡ್ ಸೆಂಟರ್ ಮಾಡಿದ್ದಾರೆ ಎಂದು ಭದ್ರತಾ ಗುಪ್ತಚರ ಮಾಹಿತಿ ಲಭ್ಯವಾಗಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ.