ಜರುಸಲೇಂ: ಇಸ್ರೇಲಿ ಸೇನೆ ಶನಿವಾರ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು ವಾರದ ಹಿಂದೆ ಇಸ್ರೇಲ್ನಲ್ಲಿ ನೋವಾ ಸಂಗೀತ ಉತ್ಸವದ ಮೇಲೆ ಹಮಾಸ್ ಉಗ್ರ ಮಾರಣಾಂತಿಕ ದಾಳಿಯನ್ನು ಅದರಲ್ಲಿ ತೋರಿಸಲಾಗಿದೆ.
ಈ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ 260 ಜನರು ಸಾವನ್ನಪ್ಪಿದ್ದು, ಹಲವರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ. ಹಮಾಸ್ ಉಗ್ರರು ಸಂಗೀತ ಉತ್ಸವ ಆಯೋಜಿಸಲಾಗಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೌಚಾಲಯದ ಬಾಗಿಲುಗಳಿಗೆ ಸಾಲಾಗಿ ಗುಂಡು ಹಾರಿಸುವ ದೃಶ್ಯವಿದೆ.
ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಗಳವರೂ ತಮ್ಮ ಮೇಲೆ ಉಂಟಾದ ದೌರ್ಜನ್ಯವನ್ನು ಹೊರ ಜಗತ್ತಿಗೆ ತೋರಿಸಲು ವಿಡಿಯೋಗಳ ಸರಣಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.
ಇಸ್ರೇಲಿ ಬಾಂಬ್ ದಾಳಿಯಲ್ಲಿ ಗಾಜಾದ ಜನರು ಅನುಭವಿಸುತ್ತಿರುವ ನೋವಿನ ಕುರಿತು ಹಮಾಸ್ ವೀಡಿಯೊಗಳನ್ನು ಬಿಡುಗಡೆ ಮಾಡಿದೆ.
ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡುತ್ತಿದ್ದಾರೆ ಎಂದು ಇಸ್ರೇಲ್ ವಿಡಿಯೋ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಹಮಾಸ್ ಕಾರ್ಯಕರ್ತನೊಬ್ಬ ಮಗುವನ್ನು ಸಂತೈಸುವ ವಿಡಿಯೋ ಬಿಡುಗಡೆಯಾಗಿದೆ.