ಮೆಕ್ಸಿಕೊ: ಅಗಾಥಾ ಚಂಡಮಾರುತಕ್ಕೆ ಮೆಕ್ಸಿಕೊ ನಲುಗಿದೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ 10 ಮಂದಿ ಸಾವನ್ನಪ್ಪಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ರಾಜ್ಯ ಓಕ್ಸಾಕಾದ ಗವರ್ನರ್ ಮಂಗಳವಾರ ಮಾಹಿತಿ ನೀಡಿದ್ದಾರೆ.
ಅಗಾಥಾ ಚಂಡಮಾರುವು ಅಪಾರ ಹಾನಿಯುಂಟುಮಾಡಿದ್ದು, ಅನೇಕ ಮನೆಗಳು, ರೆಸ್ಟೋರೆಂಟ್ಗಳು ನೆಲಸಮವಾಗಿವೆ. ವಸತಿ ಪ್ರದೇಶ ಮತ್ತು ರಸ್ತೆಗಳು ಜಲಾವೃತವಾಗಿದ್ದು, ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಇಲ್ಲಿನ ಜನರ ಜೀವನ ಅಸ್ಥವ್ಯಸ್ಥವಾಗಿದೆ ಎಂದು ಗವರ್ನರ್ ಅಲೆಜಾಂಡೋ ಮುರಾತ್ ಹೇಳಿದ್ದಾರೆ.
ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಅನೇಕ ಜನರು ಮಣ್ಣಿನಡಿ ಸಿಲುಕಿದ್ದಾರೆ. ಇನ್ನೂ, ಹುವಾಟುಲ್ಕೊ ರೆಸಾರ್ಟ್ ಬಳಿ ಮೂವರು ಮಕ್ಕಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ ಎಂದು ಗವರ್ನರ್ ಹೇಳಿದ್ದಾರೆ.
ಓಕ್ಸಾಕಾದಲ್ಲಿನ ಸಣ್ಣ ಕಡಲತೀರದ ಪಟ್ಟಣಗಳಲ್ಲಿ ಭೂಕುಸಿತವಾಗಿದೆ. ಇದು ಪ್ರಬಲವಾದ ವರ್ಗ 2 ಚಂಡಮಾರುತವಾಗಿದ್ದು, ಗರಿಷ್ಠ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಅಗಾಥಾ ಚಂಡಮಾರುತ ಮಂಗಳವಾರ ಈಶಾನ್ಯಕ್ಕೆ ವೆರಾಕ್ರಜ್ ರಾಜ್ಯಕ್ಕೆ ಚಲಿಸುತ್ತಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ.
ಕರಾವಳಿಯ ಸಮೀಪವಿರುವ ಕೆಲವು ಸಮುದಾಯಗಳಿಗೆ ವಿದ್ಯುತ್ ಅನ್ನು ಮರುಸ್ಥಾಪಿಸಲಾಗಿದೆ. ಇನ್ನೂ ಕೆಲವು ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಮಣ್ಣಿನ ಗುಡ್ಡ ಕುಸಿತದಿಂದ ಹಲವಾರು ಹೆದ್ದಾರಿಗಳನ್ನು ನಿರ್ಬಂಧಿಸಿವೆ ಎಂದು ಮುರಾತ್ ಹೇಳಿದರು.