ಇಸ್ಲಾಮಾಬಾದ್ : ವಾಯವ್ಯ ಪಾಕಿಸ್ಥಾನದಲ್ಲಿ ಶುಕ್ರವಾರ ಪ್ರಾರ್ಥನೆಯ ವೇಳೆ ಶಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪೇಶಾವರದ ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ 30 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ಡಾನ್ ವರದಿ ಮಾಡಿದೆ. ಗಾಯಗೊಂಡಿರುವ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ದಾಳಿಕೋರರು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿ ಕಾವಲು ನಿಂತ ಪೊಲೀಸರ ಮೇಲೆ ಗುಂಡು ಹಾರಿಸಿದರು ಎಂದು ರಾಜಧಾನಿ ನಗರ ಪೊಲೀಸ್ ಅಧಿಕಾರಿ ಪೇಶಾವರ್ ಇಜಾಜ್ ಅಹ್ಸಾನ್ ಹೇಳಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಗುಂಡಿನ ದಾಳಿಯ ನಂತರ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು.