ಒಟ್ಟಾವ: ಕೊರೊನಾ ವೈರಸ್ನ ಹೊಸ ರೂಪಾಂತರ ತಳಿ ಓಮಿಕ್ರಾನ್ನ ಎರಡು ಸೋಂಕು ಪ್ರಕರಣಗಳು ಕೆನಡಾದಲ್ಲೂ ಪತ್ತೆಯಾಗಿವೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.ಈ ಇಬ್ಬರು ವ್ಯಕ್ತಿಗಳು ನೈಜೀರಿಯಾದಿಂದ ವಾಪಾಸಾಗಿದ್ದರು ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮಿಕ್ರಾನ್’ ಎಂಬ ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.
ಕೆನಾಡದ ರಾಜಧಾನಿ ಒಟ್ಟಾವದಲ್ಲಿ ನೆಲೆಸಿರುವ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮಿಕ್ರಾನ್ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.