ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧವು ‘ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಂದು ವೇಳೆ ತಾನು ಈಗಲೇ ಯುದ್ಧದಿಂದ ಹಿಂದೆ ಸರಿದರೂ, ಇರಾನ್ ತನ್ನನ್ನು ಮರುನಿರ್ಮಾಣ ಮಾಡಿಕೊಳ್ಳಲು ಕನಿಷ್ಠ 20 ವರ್ಷಗಳು ಬೇಕಾಗುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯುದ್ಧವು ಬಹುತೇಕ ಮುಗಿಯುವ ಹಂತದಲ್ಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ‘ಫಾಕ್ಸ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು, ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರುತ್ತಿತ್ತು. ಅವರ ಬಳಿ ಪರಮಾಣು ಅಸ್ತ್ರ ಇದ್ದಿದ್ದರೆ, ನೀವು ಅಲ್ಲಿರುವ ಪ್ರತಿಯೊಬ್ಬರನ್ನು ‘ಸರ್’ ಎಂದು ಕರೆಯಬೇಕಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.

ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏಪ್ರಿಲ್‌ 22ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಅಂದರೆ ಮುಂದಿನ ಎರಡು ದಿನಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸುವ ಪ್ರಸ್ತಾಪವನ್ನು ಪಾಕಿಸ್ತಾನವು ಅಮೆರಿಕ ಮತ್ತು ಇರಾನ್‌ ಮುಂದಿಟ್ಟಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.