ಲಕ್ನೋ: ಮದುವೆ ಮೆರವಣಿಗೆಯಲ್ಲಿ ಸಂಭ್ರಮದಿಂದ ಸಾಗುತ್ತಿದ್ದ 27 ವರ್ಷದ ವರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಸಾರೈ ಖ್ವಾಜಾ ಪೊಲೀಸ್ ಠಾಣಾ ವ್ಯಾಪ್ತಿಯ ಬದೌರ್ ಗ್ರಾಮದ ನಿವಾಸಿ ಆಜಾದ್ ಬಿಂದ್ ಎಂಬುವವರೇ ಮೃತಪಟ್ಟ ದುರ್ದೈವಿ. ಶುಕ್ರವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಖೇತಸಾರೈ ಪೊಲೀಸ್ ಠಾಣಾ ವ್ಯಾಪ್ತಿಯ ಬಿಬಿಪುರ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಜಾದ್ ಬಿಂದ್ ತನ್ನ ಮದುವೆ ಮೆರವಣಿಗೆಯೊಂದಿಗೆ ಮದುವೆ ಮಂಟಪದ ಕಡೆಗೆ ತೆರಳುತ್ತಿದ್ದಾಗ, ಮುಖವಾಡ ಧರಿಸಿದ ಬೈಕ್ ಸವಾರರು ಮೆರವಣಿಗೆಯನ್ನು ಅಡ್ಡಗಟ್ಟಿದ್ದಾರೆ.
ದುಷ್ಕರ್ಮಿಗಳು ವರ ಪ್ರಯಾಣಿಸುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡಿ ತಡೆದಿದ್ದಾರೆ. ನಂತರ ವರನನ್ನು ಗುರಿಯಾಗಿಸಿಕೊಂಡು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಆಜಾದ್ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಸಂಬಂಧಿಕರು ಮತ್ತು ಸ್ನೇಹಿತರು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ಅವರು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಮತ್ತು ವಿವಿಧೆಡೆ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

