ಮಸ್ಕತ್: ಅರೇಬಿಯನ್ ಸಮುದ್ರ ತೀರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಮಾನ್ ಕರಾವಳಿಯ ಸಮೀಪ ಪಲಾವ್ ಧ್ವಜ ಹೊತ್ತ ‘ಸ್ಕೈಲೈಟ್’ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ.
ಮುಸಂಡಮ್ ಪ್ರದೇಶದಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಒಮಾನ್ ಕಡಲ ಭದ್ರತಾ ಕೇಂದ್ರ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 20 ಮಂದಿಯನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನ ಹಾನಿ ಪ್ರಮಾಣ ಮತ್ತು ದಾಳಿಯ ಸ್ವರೂಪದ ಬಗ್ಗೆ ತಕ್ಷಣ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಇದಕ್ಕೂ ಮೊದಲು, ಒಮಾನ್ ದೇಶದ ಸರಕಾರಿ ಮಾಧ್ಯಮವು ಎರಡು ಡ್ರೋನ್ಗಳು ಡುಕ್ಮ್ ಪೋರ್ಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ವರದಿ ಮಾಡಿತ್ತು. ಆ ದಾಳಿಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಮಾನ್ ಕರಾವಳಿ ಪ್ರದೇಶದಲ್ಲಿ ಸಮುದ್ರ ಭದ್ರತೆಯನ್ನು ಕಠಿಣಗೊಳಿಸಲಾಗಿದ್ದು, ಸಾಗರ ಮಾರ್ಗಗಳ ಮೇಲೆ ನಿಗಾವಣೆ ಹೆಚ್ಚಿಸಲಾಗಿದೆ.

