ಬೆಂಗಳೂರು: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ನಗರದ ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಬೀದಿಗಿಳಿದು ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆ ಜಾನ್ಸನ್ ಮಾರ್ಕೆಟ್ ಸಮೀಪದ ಮಸೀದಿಯಿಂದ ಆರಂಭವಾಗಿ ರಿಚ್ಮಂಡ್ ಟೌನ್ನಿಂದ ಹೊಸೂರು ರಸ್ತೆಯವರೆಗೆ ಮೆರವಣಿಗೆಯಾಗಿ ಸಾಗಿತು.
ಹಲವು ಮುಸ್ಲಿಂ ಸಂಘಟನೆಗಳ ಸದಸ್ಯರು ಇದರಲ್ಲಿ ಭಾಗವಹಿಸಿದ್ದು, ಇಸ್ರೇಲ್ ಮತ್ತು ಅಮೆರಿಕಾ ಯುದ್ಧ ನೀತಿಗೆ ವಿರೋಧ ವ್ಯಕ್ತಪಡಿಸಿದರು. ಇಸ್ರೇಲ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ವಿರುದ್ಧ ಘೋಷಣೆಗಳನ್ನು ಕೂಗಿ, ಅಮೆರಿಕಾ ನೀತಿಯನ್ನು ಖಂಡಿಸಿದರು.
ಕಪ್ಪು ಬಟ್ಟೆ ಧರಿಸಿ ಬಂದ ಪ್ರತಿಭಟನಾಕಾರರು ರಸ್ತೆ ಉದ್ದಕ್ಕೂ ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

