ಕುವೈತ್: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ಮಂಗಳವಾರ ತಡರಾತ್ರಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಆಕಾಶದತ್ತ ದಟ್ಟವಾದ ಹೊಗೆ ಆವರಿಸಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಯಲ್ಲಿ ಇಂಧನ ಟ್ಯಾಂಕ್‌ಗೆ ಅಲ್ಪ ಪ್ರಮಾಣದ ಹಾನಿಯಾಗಿದೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರ ಬುಧವಾರ ಸ್ಪಷ್ಟಪಡಿಸಿದೆ.
ಕುವೈತ್ ನ್ಯಾಷನಲ್ ಗಾರ್ಡ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಶತ್ರು ರಾಷ್ಟ್ರದ ಒಟ್ಟು ಆರು ಡ್ರೋನ್‌ಗಳನ್ನು ಸೇನಾ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ. ಫೆಬ್ರವರಿ 28 ರಿಂದ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಆರಂಭವಾದ ಈ ಪ್ರಾದೇಶಿಕ ಯುದ್ಧವು ಇದೀಗ ಒಂದು ತಿಂಗಳನ್ನು ಪೂರೈಸುತ್ತಾ ಬಂದಿದೆ.
ಈ ಅವಧಿಯಲ್ಲಿ ಕುವೈತ್ ವಿಮಾನ ನಿಲ್ದಾಣವು ಹಲವು ಬಾರಿ ಗುರಿಯಾಗಿದ್ದು, ಮಾರ್ಚ್ 14 ರಂದು ನಡೆದ ದಾಳಿಯಲ್ಲಿ ನಿಲ್ದಾಣದ ರಾಡಾರ್ ವ್ಯವಸ್ಥೆಗೆ ಹಾನಿಯಾಗಿತ್ತು. ಪ್ರಸ್ತುತ ಈ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸಂಚಾರವನ್ನು ಬಹುತೇಕ ಸ್ಥಗಿತಗೊಳಿಸಲಾಗಿದೆ.

