ಟೆಹ್ರಾನ್‌: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಗುರುವಾರ ಹೊಸ ಮಾರ್ಗವನ್ನು ಸೂಚಿಸಿದೆ.

ಜಲಸಂಧಿಯ ಮುಖ್ಯ ಭಾಗದಲ್ಲಿ ಕಡಲ ಮೈನ್‌ಗಳು ಇರುವ ಭೀತಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಡಗುಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಇರಾನ್ ಸೂಚನೆ ನೀಡಿದೆ. ಜಾಗತಿಕ ತೈಲ ಪೂರೈಕೆಯ ಶೇಕಡಾ 20 ರಷ್ಟು ಭಾಗ ಈ ಜಲಸಂಧಿಯ ಮೂಲಕವೇ ಸಾಗುವುದರಿಂದ ಇರಾನ್‌ನ ಈ ನಿರ್ಧಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕಡಲ ಸುರಕ್ಷತೆಯ ನಿಯಮಗಳನ್ನು ಪಾಲಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಹಡಗುಗಳು ಪರ್ಯಾಯ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಗಡುವಿಗಿಂತ ಕೆಲವೇ ಕ್ಷಣಗಳ ಮೊದಲು ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಭಾಗವಾಗಿ ಇರಾನ್ ತಾತ್ಕಾಲಿಕವಾಗಿ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿದೆ.