ಮಂಗಳೂರು : ಹಿಂದೂ ಸಮಾಜದ ಐಕ್ಯತೆಗೆ ಮತ್ತು ಲೋಕಕಲ್ಯಾಣಾರ್ಥವಾಗಿ ಏ 12 ರಂದು ಆದಿತ್ಯವಾರ ಬೆಳಗ್ಗೆ 6 ಗಂಟೆಗೆ 6ನೇ ವರ್ಷದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ನಡೆಯಲಿದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ವಿಶ್ವ ಹಿಂದೂ ಪರಿಷದ್, ಹಿಂದು ಸನಾತನ ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧವಾಗಿದ್ದು, ನಮ್ಮ ಧರ್ಮ, ದೇವರು, ದೈವ, ಧಾರ್ಮಿಕ ನಂಬಿಕೆಗಳಿಗೆ ಅಪಚಾರವಾದಾಗ ಅದನ್ನು ಪ್ರತಿಭಟಿಸುವ ಮೂಲಕ ಸಮಸ್ತ ಹಿಂದು ಸಮಾಜವನ್ನು ಒಗ್ಗೂಡಿಸುವ ದೃಢಸಂಕಲ್ಪವನ್ನು ಹೊಂದಿದೆ. ಅದೇ ರೀತಿ ಸಾಮೂಹಿಕ ಪ್ರಾರ್ಥನೆ, ಪಾದಯಾತ್ರೆಯ ಮೂಲಕ ಜನರಲ್ಲಿ ಆಸ್ತಿಕತೆಯನ್ನು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ.
ಕಳೆದ 5 ವರ್ಷಗಳ ಹಿಂದೆ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿ ಸನ್ನಿಧಿಗೆ ಪಾದಯಾತ್ರೆ ನಡೆಸುವುದರ ಮೂಲಕ ದೈವ ದೇವರುಗಳ ಬಗ್ಗೆ ಭಕ್ತಿ, ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯ ಮಾಡಿದೆ. ಹಿಂದೂ ವಿರೋಧಿ ಕೃತ್ಯಗಳು ಮಾಯವಾಗಿ, ಸಮಸ್ತ ಹಿಂದೂ ಸಮಾಜ ಐಕ್ಯತೆಯ ಜೊತೆಗೆ ಲೋಕಕಲ್ಯಾಣದ ಸದುದ್ದೇಶದಿಂದ ತಾ. 12-4-2026 ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನ ವರೆಗೆ ನಡೆಯುವ ಪಾದಯಾತ್ರೆಯ ಈ ಪುಣ್ಯಕಾರ್ಯದಲ್ಲಿ ತಾವೆಲ್ಲರೂ ಸಕುಟುಂಬ ಸಮೇತರಾಗಿ ಭಾಗವಹಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ವಿನಂತಿಸಿದರು.

