ವಾಷಿಂಗ್ಟನ್: ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳಂತಹ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದು ಯುದ್ಧಾಪರಾಧ ಎಂಬ ಟೀಕೆಗಳನ್ನುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದು, ‘ಇರಾನಿಯನ್ನರನ್ನು ಪ್ರಾಣಿಗಳಿಗೆ’ ಹೋಲಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಅಧ್ಯಕ್ಷ ಟ್ರಂಪ್ ಅದಕ್ಕೆ ಸೊಪ್ಪು ಹಾಕಿಲ್ಲ. ಅಂತಹ ದಾಳಿಗಳು ಯುದ್ಧಾಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ.

‘ಇರಾನ್ ತಂಡದೊಂದಿಗೆ ಸದ್ಯ ಮಾತುಕತೆಗಳು ನಡೆಯುತ್ತಿವೆ. ಫಲಿತಾಂಶ ಏನಾಗಲಿದೆ ಎಂದು ಕಾದು ನೋಡೋಣ’ ಎಂದು ಅವರು ತಿಳಿಸಿದ್ದಾರೆ. ಈ ಹಿಂದಿನ ವೈಮಾನಿಕ ದಾಳಿಗಳಲ್ಲಿ ಹತರಾದ ನಾಯಕರಿಗಿಂತ, ಈಗಿನ ಇರಾನ್ ಪ್ರತಿನಿಧಿಗಳು ಕಡಿಮೆ ಉಗ್ರಗಾಮಿ ಧೋರಣೆ ಹೊಂದಿದ್ದಾರೆ. ‘ಈ ತಂಡವು ಹೆಚ್ಚು ಬುದ್ಧಿವಂತಿಕೆಯಿಂದ ಕೂಡಿದೆ ಎಂದು ನಾವು ಭಾವಿಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.