ಕಲಬುರಗಿ: ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರ ಮೃತದೇಹ ರಸ್ತೆಬದಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಿವಾಸಿಯಾಗಿರುವ ಜ್ಯೋತಿ ಕಪಾಳೆ (57) ಕೊಲೆಯಾದವರು ಎಂಬ ಮಾಹಿತಿ ತಿಳಿದು ಬಂದಿದೆ.
ಮೃತದೇಹ ಬಹುತೇಕ ಸುಟ್ಟು ಕರಕಲಾಗಿದೆ. ಎರಡು ಕಾಲುಗಳ ಪಾದಗಳಿಗೆ ಬೆಂಕಿ ತಗುಲಿಲ್ಲ. ಒಂದು ಕಾಲಿನಲ್ಲಿ ಧರಿಸಿದ ಚಪ್ಪಲಿ ಇದ್ದು, ಇನ್ನೊಂದು ಚಪ್ಪಲಿ ಕೆಳಗೆ ಬಿದ್ದ ಸ್ಥಿತಿಯಲ್ಲಿತ್ತು. ಹೀಗಾಗಿ ಮಹಿಳೆಯನ್ನು ಬೇರೆಡೆ ಕೊಲೆಗೈದಿರುವ ಕಿಡಿಗೇಡಿಗಳು, ಇಲ್ಲಿ ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹ ಕಲಮೂಡ ಗ್ರಾಮದಿಂದ ಅಂದಾಜು ಒಂದು ಕಿ.ಮೀ ಅಂತರದ ಹೆದ್ದಾರಿ ಸಮೀಪ ಸಿಕ್ಕಿದೆ.
ಸಿಪಿಐ ಶಿವಶಂಕರ ಸಾಹು, ಸಿಬ್ಬಂದಿಗಳಾದ ಕುಪೇಂದ್ರ, ಹುಸೇನ ಪಟೇಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

