ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿವಿಧ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಾಬಲ್ಯ ಮೆರೆದಿದೆ. ಬಿಜೆಪಿ 2ನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮತ್ತು ಎಡರಂಗದ ಗೆಲುವಿನ ಸಾಧನೆ ನೀರಸವಾಗಿದೆ.
ಮಂಗಳವಾರ ರಾತ್ರಿ 10.30ರ ವರೆಗಿನ ಫಲಿತಾಂಶದ ಪ್ರಕಾರ, ತೃಣಮೂಲ ಕಾಂಗ್ರೆಸ್ ಒಟ್ಟು 29,665 ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ 8,021 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಾಂಗ್ರೆಸ್ 2,094 ಹಾಗೂ ಎಡ (ಸಿಪಿಎಂ, ಸಿಪಿಐ, ಎಐಎಫ್ಬಿ, ಆರ್ಎಸ್ಪಿ) ಪಕ್ಷಗಳು 2,595 ಸ್ಥಾನಗಳನ್ನು ಪಡೆದಿವೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಟ್ಟಾರೆ 4,689 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
‘ಮತಪತ್ರಗಳ ಎಣಿಕೆ ಪ್ರಗತಿಯಲ್ಲಿದೆ. ಇನ್ನೂ 2 ದಿನ ಎಣಿಕೆ ನಡೆಯಬಹುದು’ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 8ರಂದು ಮತದಾನ ನಡೆದಿತ್ತು. ವಿವಿಧ ಜಿಲ್ಲೆಗಳಲ್ಲಿ ಹಿಂಸಾಚಾರ ಕೃತ್ಯಗಳು ನಡೆದು ಸುಮಾರು 15 ಜನರು ಮೃತಪಟ್ಟಿದ್ದರು. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಮುಂಜಾಗ್ರತೆಯಾಗಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.