ಕೊಲ್ಕತ್ತಾ: ಈ ಹಿಂದೆ ಕೇಂದ್ರ ಸರ್ಕಾರ ಪೌರತ್ವ ತಿದ್ದು ಪಡಿ ಕಾಯ್ದೆ ಜಾರಿಗೊಳಿಸಲು ಹೊರಟಾಗ ಭಾರಿ ಸಂಘರ್ಷ ಉಂಟಾಗಿತ್ತು. ದೇಶದ ಹಲವೆಡೆ ಪ್ರತಿಭಟನೆಗಳು ಸರಣಿಯಾಗಿ ನಡೆದಿತ್ತು. ಇದೀಗ ಮತ್ತೆ ಪೌರತ್ವ ಕಾಯ್ದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಪೂರ್ವಭಾವಿಯಾಗಿ ಕೋಲ್ಕತ್ತಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮತದಾರರು ಮತ್ತು ಆಧಾರ್ ಕಾರ್ಡ್ಗಳನ್ನು ನುಸುಳುಕೋರರಿಗೆ ಅಕ್ರಮವಾಗಿ ವಿತರಿಸಲಾಗುತ್ತಿದೆ. “ಇಷ್ಟು ಒಳನುಸುಳುವಿಕೆ ಸಂಭವಿಸುವ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತದೆಯೇ?. ಅದಕ್ಕಾಗಿಯೇ ಮಮತಾ ಬ್ಯಾನರ್ಜಿ ಸಿಎಎ ಅನ್ನು ವಿರೋಧಿಸುತ್ತಿದ್ದಾರೆ ಎಂದು ಶಾ ಗುಡುಗಿದ್ದಾರೆ.
ಸಿಎಎ, 2015 ರ ಮೊದಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುತ್ತದೆ. ಸಿಎಎ ಮುಸ್ಲಿಮರನ್ನು ಹೊರಗಿಡುತ್ತದೆ, ಇದು ಅಸಂವಿಧಾನಿಕ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.