News Karnataka Kannada
Sunday, May 12 2024
ಉತ್ತರ ಪ್ರದೇಶ

ಸ್ಪಿಕ್‍ಮೆಕೆ: ಶ್ರೋತೃಗಳ ಮನಗೆದ್ದ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ

Mekay: Praveen Godkhindi's flute recital won the hearts of listeners
Photo Credit : By Author

ಗೋಕರ್ಣ: ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಗಂಧರ್ವ ಕಲೆಗಳಿಗಾಗಿಯೇ ಪ್ರತ್ಯೇಕ ಗುರುಕುಲಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಲಾವಿದ ಪ್ರವೀಣ್ ಗೋಡ್ಖಿಂಡಿಯವರ ಬಾನ್ಸುರಿ ವಾದನವನ್ನು ಆಲಿಸಿದ ಬಳಿಕ ಮೇರು ಕಲಾವಿದರನ್ನು ಸನ್ಮಾನಿಸಿದ ಶ್ರೀಗಳು, ಪ್ರತಿಯೊಂದು ಸಂಗೀತ ಪ್ರಕಾರಗಳಿಗೆ ಪ್ರತ್ಯೇಕ ಗುರುಕುಲಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದ್ದು, ನಿಮ್ಮಂಥ ಅಪೂರ್ವ ಕಲಾವಿದರ ಸಹಕಾರದಿಂದಷ್ಟೇ ಇದು ಕಾರ್ಯರೂಪಕ್ಕೆ ಬರಬಹುದು ಎಂದು ಹೇಳಿದರು.

ಸಂಗೀತಕ್ಕೆ ಮಾಂತ್ರಿಕ ಶಕ್ತಿ ಇದೆ. ಸಂಗೀತ ಕಲೆಯ ವಿವಿಧ ಆಯಾಮಗಳನ್ನು, ವಿಭಿನ್ನ ಪ್ರಕಾರಗಳನ್ನು ಉಳಿಸಿ ಬೆಳೆಸಲು ಸಂಘಟಿತ ಪ್ರಯತ್ನದ ಅಗತ್ಯವಿದ್ದು, ಇದಕ್ಕೆ ಮೇರು ಕಲಾವಿದರು ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದಲ್ಲಿ ಸಂಗೀತ ಅವಿಭಾಜ್ಯ ಅಂಗವಾಗಬೇಕು. ಇತರ ವಿಷಯಗಳ ಕಲಿಕೆಗೆ ಸಂಗೀತ ಪೂರಕ. ಸಂಗೀತಕ್ಕೆ ನಮ್ಮ ಜ್ಞಾಪಕಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದು ಗುರುಕುಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರವೀಣ್ ಗೋಡ್ಖಿಂಡಿ  ಸಂಗೀತ ಎಂದೂ ಓದಿಗೆ ಅಡ್ಡಿಯಲ್ಲ. ಸಂಗೀತ ಹಾಗೂ ಇತರ ವಿಷಯಗಳ ಓದು ಜತೆಜತೆಗೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಸಂಗೀತ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು ಸ್ಪಿಕ್ ಮೆಕೆ ಕಾರ್ಯಕ್ರಮದ ಉದ್ದೇಶ. ಆದರೆ ಇಲ್ಲಿಯ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಸಂಗೀತ ಪ್ರಕಾರಗಳ ಮೂಲ ಪರಿಚಯ ಇದ್ದು, ಈ ಮಕ್ಕಳೇ ನಮಗೆ ಸ್ಫೂರ್ತಿ ನೀಡುವಂತಿದ್ದಾರೆ. ಇಂಥ ಅಪೂರ್ವ ಪರಿಸರದಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಹೆಚ್ಚು ಅರ್ಥಪೂರ್ಣ ಎಂದು ನುಡಿದರು.

ನಾದವೈಭವ: ಇದಕ್ಕೂ ಮುನ್ನ ಸ್ಪಿಕ್ ಮೆಕೆ ಆಯೋಜಿಸಿದ್ದ ಈ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಆಲಾಪನೆ ಬಳಿಕ ರೂಪಕ್ ಹಾಗೂ ತೀನ್‍ತಾಲ್ ರಚನೆಗಳನ್ನು ಪ್ರಸ್ತುತಪಡಿಸಿದರು.

ಬಳಿಕ ಮಿಯಾ ಮಲ್ಹಾರದಲ್ಲಿ ಮಳೆರಾಗವನ್ನು ನುಡಿಸಿದರೆ, ಮಿಶ್ರ ಪಹಾಡಿಯಾ ಆಲಾಪದ ಮೂಲಕ ಪ್ರಕೃತಿ, ನೀರು, ಪಶು ಪಕ್ಷಿಗಳ ಝೇಂಕಾರದ ರಮ್ಯ ಪರಿಸರವನ್ನು ಸೃಷ್ಟಿಸಿ, ಶ್ರೋತೃಗಳನ್ನು ಗಾನ ಲೋಕಕ್ಕೆ ಕರೆದೊಯ್ದರು. ಖ್ಯಾತ ತಬಲಾ ಕಲಾವಿದ ಪಂಡಿತ್ ರವೀಂದ್ರ ಯಾವಗಲ್ ತಬಲಾದಲ್ಲಿ ಸಾಥ್ ನೀಡಿದರು. ಉಭಯ ಕಲಾವಿದರ ಪರಸ್ಪರ ಸಮನ್ವಯದ ಮೂಲಕ ಅಭೇದವನ್ನು ಮೂಡಿಸಿ ನಿಬ್ಬೆರಗುಗೊಳಿಸಿದರು.

ಬಳಿಕ ವಿದ್ಯಾರ್ಥಿಗಳ ಜತೆಗೆ ಗೋಡ್ಖಿಂಡಿ ಸಂವಾದ ನಡೆಸಿ, ಸಂಗೀತ ಬಗೆಗಿನ ವಿದ್ಯಾರ್ಥಿಗಳ ಆಸಕ್ತಿ ಮತ್ತು ಪರಿಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿವಿ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಕಾರ್ಯಕ್ರಮ ನೀಡಲು ತಮ್ಮ ಶಿಷ್ಯ ಬಳಗದ ಜತೆ ಮತ್ತೊಮ್ಮೆ ಆಗಮಿಸುವುದಾಗಿ ಭರವಸೆ ನೀಡಿದರು.

ಹಿರಿಯ ಕಲಾವಿದರಾದ ಶಂಭು ಭಟ್, ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ, ಪರಂಪರಾ ಗುರುಕುಲದ ಪ್ರಾಚಾರ್ಯರಾದ ನಹಸಿಂಹ ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು