ಅಯೋಧ್ಯೆ: ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ ದೇವಸ್ಥಾನಕ್ಕೆ ಹರಿದುಬಂದ ಧನದ ಮೊತ್ತವನ್ನು ಟ್ರಸ್ಟ್ ಅಧಿಕಾರಿಗಳು ಬರಿರಂಗಪಡಿಸಿದ್ದಾರೆ. 25 ಕೆಜಿ ಚಿನ್ನ ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಸುಮಾರು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ರಾಮಮಂದಿರ ಟ್ರಸ್ಟ್ನ ಅಧಿಕಾರಿ ಪ್ರಕಾಶ್ ಗುಪ್ತಾ, ಚೆಕ್, ಡ್ರಾಫ್ಟ್ ಮತ್ತು ದೇವಸ್ಥಾನದ ಟ್ರಸ್ಟ್ನ ಕಚೇರಿಯಲ್ಲಿ ಠೇವಣಿ ಮಾಡಿದ ನಗದು ಹಾಗು ಪೆಟ್ಟಿಗೆಗಳಲ್ಲಿ ಹಾಕಲಾದ ಕಾಣಿಕೆಯ ಮೂಲಕ 25 ಕೋಟಿ ರೂ ಸಂಗ್ರಹವಾಗಿದೆ. ಟ್ರಸ್ಟ್ನ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಮಾಡಿದ ಆನ್ಲೈನ್ ವಹಿವಾಟಿನ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ಹೇಳಿದರು.
ಪ್ರಾಣಪ್ರತಿಷ್ಠಯಾದ ಮರುದಿನದಿಂದ 60 ಲಕ್ಷ ಭಕ್ತರು ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ರಾಮನವಮಿಯಂದು 50 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಆ ಸಮಯದಲ್ಲಿ ಕಾಣಿಕೆ ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಸ್ವಯಂಚಾಲಿತ ಹೈಟೆಕ್ ಯಂತ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದ್ದಾರೆ.