ಹೈದರಾಬಾದ್: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಎಲ್ ಪಿ ಜಿ ಸಿಲಿಂಡರ್ ಸ್ಫೋಟದಿಂದಾಗಿ ಮನೆಗೆ ಬೆಂಕಿ ತಗುಲಿ ಆರು ವರ್ಷದ ಬಾಲಕಿ ಮತ್ತು ಆಕೆಯ 60 ವರ್ಷದ ಅಜ್ಜಿ ಸಾವನ್ನಪ್ಪಿದ್ದಾರೆ.
ಮೇದಕ್ ಜಿಲ್ಲೆಯ ಚಿನ್ನ ಶಿವನೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಮಧು ಮತ್ತು ಆಕೆಯ ಅಜ್ಜಿ ಅಂಜಮ್ಮ ಎಂದು ಗುರುತಿಸಲಾಗಿದೆ. ಸ್ಫೋಟ ಮತ್ತು ಬೆಂಕಿಯಲ್ಲಿ ಮನೆ ಸಂಪೂರ್ಣವಾಗಿ ನಾಶವಾಗಿದೆ.
ಪೊಲೀಸರ ಪ್ರಕಾರ, ಹೈದರಾಬಾದ್ನಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದ ಅಂಜಮ್ಮ ಮಂಗಳವಾರ ತನ್ನ ಮೊಮ್ಮಗಳೊಂದಿಗೆ ಪಡಿತರ ಅಂಗಡಿಯಿಂದ ಅಕ್ಕಿ ಸಂಗ್ರಹಿಸಲು ಮತ್ತು ಮಾಸಿಕ ಪಿಂಚಣಿ ಪಡೆಯಲು ಗ್ರಾಮಕ್ಕೆ ಬಂದಿದ್ದರು.
ನಡುರಾತ್ರಿಯಲ್ಲಿ ಸಂಭವಿಸಿದ ಬೃಹತ್ ಸ್ಫೋಟವು ಗ್ರಾಮದಲ್ಲಿ ಭೀತಿಯನ್ನು ಸೃಷ್ಟಿಸಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅನಿಲ ಸೋರಿಕೆಯೇ ಈ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಶವಗಳನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.