ಹೈದರಾಬಾದ್: ತೆಲುಗಿನ ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಜಾಮೀನು ಅರ್ಜಿಯನ್ನು ನಾಂಪಲ್ಲಿ ನ್ಯಾಯಾಲಯ ತಿರಸ್ಕರಿಸಿದೆ. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಾರೆ ಎನ್ನುವ ಕಾರಣಕ್ಕಾಗಿ ತೆಲುಗಿನ ಬಿಗ್ ಬಾಸ್ ಸೀಸನ್ 7 ರ ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದರು. ಪಲ್ಲವಿ ಪ್ರಶಾಂತ್ ಅವರ ಜೊತೆಗೆ ಸಹೋದರ ಮನೋಹರ್ ಅವರನ್ನು ಕೂಡ ಬಂಧಿಸಲಾಗಿತ್ತು. ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಬಿಗ್ ಬಾಸ್ ಕಂಟೆಸ್ಟೆಂಟ್ ಅಭಿಮಾನಿಗಳು ಕಿತ್ತಾಡಿಕೊಂಡ ಪ್ರಕರಣ ಹೈದರಾಬಾದ್ ನಲ್ಲಿ ಮೊನ್ನೆ ನಡೆದಿತ್ತು. ಫಿನಾಲೆ ವೇಳೆ ಸ್ಟುಡಿಯೋದಲ್ಲಿ ಗಲಾಟೆ ನಡೆದಿದ್ದು, ಕಾರು ಮತ್ತು ಬಸ್ ಗಳು ಜಖಂ ಆಗಿದ್ದವು. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು. ಈ ವೇಳೆ ಕಂಟೆಸ್ಟೆಂಟ್ ಆಗಿದ್ದ ಅಮರ್ ದೀಪ್ ಮತ್ತು ಪಲ್ಲವಿ ಪ್ರಶಾಂತ್ ಅವರ ಅಭಿಮಾನಿಗಳು ಆಗಮಿಸಿ ದಾಂಧಲೆ ಮಾಡಿದ್ದರು.
ಗ್ರ್ಯಾಂಡ್ ಫಿನಾಲೆಯಲ್ಲಿ ಪಲ್ಲವಿ ಪ್ರಶಾಂತ್ ವಿನ್ ಆಗಿ, ಅಮರ್ ದೀಪ್ ರನ್ನರ್ ಅಪ್ ಆಗಿ ಘೋಷಣೆ ಆಗುತ್ತಿದ್ದಂತೆಯೇ ಗಲಾಟೆ ಶುರುವಾಗಿತ್ತು. ಇಬ್ಬರ ಫ್ಯಾನ್ಸ್ ಮಾತು ವಿಕೋಪಕ್ಕೆ ಹೋದ ಕಾರಣದಿಂದಾಗಿ ಆರ್.ಟಿ.ಸಿ ಬಸ್ ಮತ್ತು ಕಾರಿನ ಗಾಜು ಪುಡಿ ಪುಡಿ ಆಗಿದೆ.
ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ ಪ್ರಶಾಂತ್ ಅವರನ್ನು ಬಂಧಿಸಿದ್ದಾರೆ.