ದೆಹಲಿ : ಮಧ್ಯಪ್ರದೇಶ ಸಂಪುಟ ವಿಸ್ತರಣೆಯ ಭಾಗವಾಗಿ 28 ಸಚಿವರು ಇಂದು(ಸೋಮವಾರ) ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇವೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಶಾಸಕರ ನಿಖರ ಸಂಖ್ಯೆ ಮತ್ತು ಹೆಸರನ್ನು ಬಹಿರಂಗಪಡಿಸಲು ಸಿಎಂ ಯಾದವ್ ನಿರಾಕರಿಸಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ವಿಡಿ ಶರ್ಮಾ ಅವರ ಮಾರ್ಗದರ್ಶನದಲ್ಲಿ ಹೊಸ ಸಚಿವ ಸಂಪುಟವು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ಭಾನುವಾರ ಸಂಜೆ ನಡ್ಡಾ ಅವರನ್ನು ಭೇಟಿ ಮಾಡಿದ ಸಿಎಂ ಹೇಳಿದರು.
ಯಾದವ್ ಅವರು ಸಂಪುಟ ವಿಸ್ತರಣೆಗೆ ಮುನ್ನ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರಿಗೆ ಸೇರ್ಪಡೆಗೊಳ್ಳಲಿರುವ ಸಚಿವರ ಪಟ್ಟಿಯನ್ನು ಹಸ್ತಾಂತರಿಸಿದರು. ಪಟೇಲ್ ಅವರು ಮಧ್ಯಾಹ್ನ 3.30ಕ್ಕೆ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಯಾದವ್ ಮತ್ತು ಉಪ ಮುಖ್ಯಮಂತ್ರಿಗಳಾದ ಜಗದೀಶ್ ಡಿಯೋಡಾ ಮತ್ತು ರಾಜೇಂದ್ರ ಶುಕ್ಲಾ ಅವರು ಡಿಸೆಂಬರ್ 13 ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೂರು ಬಾರಿ ಶಾಸಕರಾಗಿದ್ದ ಯಾದವ್ ಅವರನ್ನು ಸಿಎಂ ಆಗಿ ಬಿಜೆಪಿ ನೇಮಕ ಮಾಡಿತ್ತು.