ಜೈಪುರ: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬಳಿಕ ದೇಶದಲ್ಲಿ ಜಾತಿ ಗಣತಿಯ ಬಗ್ಗೆ ಚರ್ಚೆಗಳು ಜೋರಾಗಿವೆ. ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶಿಸಿದೆ. ಶನಿವಾರ ರಾತ್ರಿ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದೆ.
ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆದೇಶ ಹೇಳಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಇಂತಹ ಸಮಯದಲ್ಲಿಯೇ ಸರ್ಕಾರ ಜಾತಿ ಸಮೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿದೆ. ಬಿಹಾರ ಬಳಿಕ ಜಾತಿ ಸಮೀಕ್ಷೆ ನಡೆಸುತ್ತಿರುವ 2ನೇ ರಾಜ್ಯ ರಾಜಸ್ಥಾನವಾಗಿದೆ.
ಈ ಆದೇಶವು ಜನ ಗಣತಿ ನಡೆಸಲು ಸಮಯದ ಚೌಕಟ್ಟನ್ನು ಒದಗಿಸಿಲ್ಲ. ಇದಕ್ಕೂ ಮುನ್ನ ಜಾತಿ ಗಣತಿ ಕುರಿತು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು.