ಚಂಡೀಗಡ: ಪಂಜಾಬ್ ಕಾಂಗ್ರೆಸ್ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಸಂಬಂಧ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಬೇಕಿದ್ದ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ.
ಹೊಸ ನಾಯಕನ ಆಯ್ಕೆಯಲ್ಲಿ ಇನ್ನು ಒಮ್ಮತ ಮೂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಖರ್, ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ತೃಪ್ತ್ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಹರಿದಾಡುತ್ತಿವೆ.
‘ಪಕ್ಷದ ನಾಯಕತ್ವ ಏನೇ ನಿರ್ಧರಿಸಿದರೂ ನಾವು ಅದನ್ನು ಪಾಲಿಸುತ್ತೇವೆ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.