ಮಹಾರಾಷ್ಟ್ರ: ಅಕೋಲಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ತಂಗಿ ಪಿಯು ಪರೀಕ್ಷೆಯಲ್ಲಿ ಕಾಪಿ ಮಾಡಲು ಸಹಾಯವಾಗಲೆಂದೇ ನಕಲಿ ಪೊಲೀಸ್ ಸಮವಸ್ತ್ರದಲ್ಲಿ ಪರೀಕ್ಷಾ ಕೊಠಡಿಗೆ ಬಂದಿದ್ದಾನೆ.
ಆದರೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಅನುಪಮ್ ಮದನ್ ಖಂಡಾರೆ (24) ಎಂದು ಗುರುತಿಸಲಾಗಿದ್ದು, ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆ ಪತ್ತೆಯಾಗಿದೆ. ಸದ್ಯ ಮಾಡಿದ ತಪ್ಪಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲಿನಲ್ಲಿದ್ದಾನೆ.
ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಮದನ್ ಸೆಲ್ಯೂಟ್ ಹೊಡೆದಿದ್ದಾನೆ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಅವರಿಗೆ ಆತನ ಮೇಲೆ ಕೊಂಚ ಅನುಮಾನ ಬಂದಿದೆ. ಜೊತೆಗೆ ಆತನ ಸಮವಸ್ತ್ರದ ಮೇಲಿನ ನಾಮಫಲಕ ಬೇರೆ ರೀತಿ ಇರುವುದರಿಂದ ತನಿಖೆ ನಡೆಸಿದಾಗ ಆತ ನಿಜವಾದ ಪೊಲೀಸ್ ಅಲ್ಲ ಎಂಬುದು ತಿಳಿದುಬಂದಿದೆ.