ಕೇರಳ: ವಲಸೆ ಕಾರ್ಮಿಕನೊಬ್ಬ 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.
ಬಿಹಾರ ಮೂಲದ ದಂಪತಿಯ ಮಗಳು ಸಂಜೆ ವೇಳೆಗೆ ನಾಪತ್ತೆಯಾಗಿದ್ದಳು, ಈ ಆರೋಪಿಯು ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯದಲ್ಲಿ ಬಿಹಾರ ಮೂಲದ ಅಸ್ಪಾಕ್ ಅಸ್ಲಾಂ ಎಂಬಾತ ಬಾಲಕಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಬಳಿಕ ರಾತ್ರಿ 9.30ರ ವೇಳೆಗೆ ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತ ನಶೆಯಲ್ಲಿದ್ದ ಹಾಗಾಗಿ ಸ್ವಲ್ಪ ಸಮಯದ ಬಳಿಕ ಮತ್ತೆ ವಿಚಾರಿಸಲಾಯಿತು.
ಆರೋಪಿ ಭಾನುವಾರ ಬೆಳಗ್ಗೆ ಅಪರಾಧ ಒಪ್ಪಿಕೊಂಡು ಮಗುವನ್ನು ಎಲ್ಲಿಗೆ ಕರೆದೊಯ್ದಿದ್ದೇನೆ ಎಂದು ತೋರಿಸಿದ್ದಾನೆ. ಆರೋಪಿಯು ಬಾಲಕಿಯ ಕಟ್ಟಡದಲ್ಲಿಯೇ ವಾಸವಿದ್ದು, ಜ್ಯೂಸ್ ಕೊಡಿಸುವುದಾಗಿ ಭರವಸೆ ನೀಡಿ ಆಕೆಯನ್ನು ಕರೆದುಕೊಂಡು ಹೋಗಿದ್ದ, ಅಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.