ವಯನಾಡ್: ಕೇರಳದ ವಯನಾಡ್ ತನ್ನ ಉದ್ದೇಶಿತ ಅರ್ಹರಿಗೆ ಸುಮಾರು ಶೇ. 100 ರಷ್ಟು ಕೋವಿಡ್ ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ವಯನಾಡಿನಲ್ಲಿ ಒಟ್ಟು 6,51,967 ಜನರು ಲಸಿಕೆ ಪಡೆಯಲು ಅರ್ಹರಾಗಿದ್ದು, ಅವರಲ್ಲಿ 6,15,729 ಮಂದಿಗೆ ಭಾನುವಾರ ರಾತ್ರಿ 7 ಗಂಟೆಯವರೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಇನ್ನೂ 36,238 ಜನರಿಗೆ ಲಸಿಕೆ ಹಾಕಬೇಕಿದೆ. ಅವರಲ್ಲಿ, ಕಳೆದ ಮೂರು ತಿಂಗಳಲ್ಲಿ 24,529 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಈಗ ಅವರು ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು 1,243 ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿಲ್ಲ. ಉಳಿದ ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದು, ಈಗ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗದ ಈ ವರ್ಗದ ಜನರನ್ನು ಹೊರತುಪಡಿಸಿ, ಸುಮಾರು ಶೇ 100ರಷ್ಟು ಅರ್ಹರು ಲಸಿಕೆ ಪಡೆದಿದ್ದಾರೆ.
ಈ ಗುರಿ ಸಾಧಿಸುವುದು ಕಠಿಣ ಕೆಲಸವಾಗಿತ್ತು ಮತ್ತು ತಂಡದ ಶ್ರಮ ಈ ಯಶಸ್ಸಿಗೆ ಕಾರಣವೆಂದು ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಅವರು ಹೇಳಿದ್ದಾರೆ.