ನಿಫಾ ವೈರಸ್ : ಕೇರಳದ ವಿಶಿಷ್ಟವಾದ ಹಣ್ಣು ರಂಬುಟಾನ್ ಸೀಸನ್ ಇದಾಗಿದೆ. ಆದರೆ ರಂಬುಟಾನ್ ಹಣ್ಣು ಖರೀದಿಸಲು ಜನ ಹೆದರುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಿಫಾ ವೈರಸ್. ಹೌದು, ಕೇರಳದ ಕೋಯಿಕ್ಕೋಡ್ನಲ್ಲಿ ಬಾಲಕ ನಿಫಾ ಸೋಂಕಿನಿಂದ ಮೃತಪಟ್ಟಿದ್ದು, ಆತನಿಗೆ ನಿಫಾ ಹರಡಿದ್ದು ರಂಬುಟಾನ್ ಹಣ್ಣಿನಿಂದ ಎನ್ನುವ ಸುದ್ದಿ ಎಲ್ಲೆಡೆ ಹರಡಿದೆ. ಆದರೆ ಬಾಲಕನಿಗೆ ವೈರಸ್ ರಂಬುಟಾನ್ ಹಣ್ಣಿನಿಂದ ತಗುಲಿರುವುದು ದೃಢವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಾಗ್ಯೂ ರಂಬುಟಾನ್ ಖರೀದಿಗೆ ಜನ ಬಾರದಿದ್ದು, ಹಣ್ಣು ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಈ ಸೀಸನ್ನಲ್ಲಿ ರಂಬುಟಾನ್ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ಬೇಡಿಕೆ ಗಮನದಲ್ಲಿಟ್ಟುಕೊಂಡು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಹಣ್ಣುಗಳನ್ನು ಖರೀದಿಸಿದ ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ. ಚಾನ್ಸ್ ತೆಗೆದುಕೊಳ್ಳುವುದು ಬೇಡ ಎಂದು ಗ್ರಾಹಕರು ನಿರ್ಧರಿಸಿದ್ದು, ಹಣ್ಣಿನ ಮಾರ್ಕೆಟ್ ಕಡೆ ಜನ ತಲೆಹಾಕುತ್ತಿಲ್ಲ. ಜನ ಹಣ್ಣು ಕೊಳ್ಳಲಿ ಎಂದು ಬೆಲೆ ಇಳಿಕೆ ಮಾಡಿದರೂ ಯಾರೂ ಹಣ್ಣು ಖರೀದಿಸಲು ಮುಂದಾಗಿಲ್ಲ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.