ನವದೆಹಲಿ: ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯಲ್ಲಿ ಮತ್ತೊಮ್ಮೆ ವಿದ್ಯಾರ್ಥಿಗಳ ನಡುವೆ ಭಾರೀ ಜಗಳ ನಡೆದಿದೆ. ವಿದ್ಯಾರ್ಥಿ ಸಂಘದ ಚುನಾವಣೆಗೂ ಮುನ್ನ ಎಬಿವಿಪಿ ಮತ್ತು ಎಡಪಂಥೀಯ ವಿದ್ಯಾರ್ಥಿಗಳು ಪರಸ್ಪರ ರಕ್ತ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಕಟ್ಟಡದಲ್ಲಿ ರಾತ್ರಿ ವೇಳೆ ಹಿಂಸಾಚಾರ ನಡೆದಿದೆ. ಶುಕ್ರವಾರ ನಡೆದ ಚುನಾವಣಾ ಸಮಿತಿ ಸದಸ್ಯರ ಸಾಮಾನ್ಯ ಸಭೆ ಆಯ್ಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ , ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಎಬಿವಿಪಿ ಸೇರಿದಂತೆ ಬಲಪಂಥೀಯ ಮತ್ತು ಎಡಪಂಥೀಯ ಬೆಂಬಲಿತ ಗುಂಪುಗಳ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ದೊಣ್ಣೆಯಿಂದ ಹೊಡೆದಾಡುವ ಹಂತಕ್ಕೆ ಜಗಳ ಹೋಗಿದೆ. ಜಗಳ ನಡೆದ ಬಳಿಕ ಎರಡೂ ಗುಂಪಿನ ಕಡೆಯವರು ಪರಸ್ಪರ ಆರೋಪ ಮಾಡುತ್ತಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳ ಒಕ್ಕೂಟ (ಜೆಎನ್ಯುಎಸ್ಯು) ಕಾಲೇಜು ಚುನಾವಣೆಗೆ ಸಿದ್ಧತೆ ನಡೆಸಿದ್ದು, ವಿದ್ಯಾರ್ಥಿ ಸಂಘವು ಚುನಾವಣಾ ಸಮಿತಿ ಸದಸ್ಯರ ಆಯ್ಕೆಗಾಗಿ ಜಿಬಿಎಂಗಳನ್ನು ನಡೆಸುತ್ತಿದೆ. ಈ ಪ್ರಕ್ರಿಯೆ ನಡೆಯುವ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಅತಿರೇಕಕ್ಕೆ ತಲುಪಿ ಹಿಂಸಾಚಾರಕ್ಕೆ ತಿರುಗಿದೆ ಎಂದು ತಿಳೀಸಿದ್ದಾರೆ.