ಜೈಪುರ: ಪತಿ ಲಂಚ ಪಡೆದು ಬಂಧನಕ್ಕೊಳಗಾದ ಬೆನ್ನಲ್ಲೇ ಜೈಪುರ ಮೇಯರ್ ಮುನೇಶ್ ಗುರ್ಜಾರ್ ಅವರನ್ನು ರಾಜಸ್ಥಾನ ಸರ್ಕಾರ ವಜಾಗೊಳಿಸಿದೆ.
ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಆಗಿರುವ ಮುನೇಶ್ ಗುರ್ಜಾರ್ ಅವರ ಪತಿ ಸುಶೀಲ್ ಗುರ್ಜರ್ ಅವರನ್ನು ನಿನ್ನೆ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು, ಭೂ ಗುತ್ತಿಗೆಗೆ ಸಂಬಂಧಿಸಿದಂತೆ 2 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಬಂಧಿಸಿದೆ. ಪರಿಣಾಮವಾಗಿ ಗುರ್ಜರ್ ಅವರನ್ನು ನಾಗರಿಕ ಸಂಸ್ಥೆಯ ಸ್ಥಾನದಿಂದ ವಜಾಗೊಳಿಸಲಾಗಿದೆ.
ಮೇಯರ್ ನಿವಾಸದಲ್ಲಿ ಅವರ ಪತಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಮೇಯರ್ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಮೇಯರ್ ವಜಾಗೊಂಡಿದ್ದಾರೆ. ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಸುಶೀಲ್ ಗುರ್ಜಾರ್ ಸಹಿತ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.