ನವದೆಹಲಿ: ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್ನ ಪ್ರಯಾಣ ದರ ಇನ್ನಷ್ಟು ಕಡಿಮೆ ಆಗಲಿದೆ. ಇಂಡಿಗೋ ಸಂಸ್ಥೆ ತನ್ನ ಇಂಧನ ಶುಲ್ಕವನ್ನು ಹಿಂಪಡೆದುಕೊಂಡಿದೆ.
ಇದರೊಂದಿಗೆ ಅದರ ಟಿಕೆಟ್ ದರಗಳೂ ಕಡಿಮೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇಂಡಿಗೋ ಏರ್ಲೈನ್ಸ್ ಒಂದು ಟಿಕೆಟ್ಗೆ ಒಂದು ಸಾವಿರ ರೂವರೆಗೂ ಫುಯಲ್ ಚಾರ್ಜ್ ಎಂದು ಹೆಚ್ಚುವರಿ ಹಣ ವಿಧಿಸುತ್ತಿತ್ತು. ವಿಮಾನದ ಇಂಧನವಾದ ಎಟಿಎಫ್ ಅಥವಾ ಜೆಟ್ ಇಂಧನದ ಬೆಲೆ ಹೆಚ್ಚಿದ್ದ ಕಾರಣ ಅಕ್ಟೋಬರ್ 5ರಿಂದ ಫುಯೆಲ್ ಚಾರ್ಜ್ ಹಾಕಿತ್ತು. ಇತ್ತೀಚೆಗೆ ಇಂಧನ ಬೆಲೆ ಕಡಿಮೆಗೊಂಡ ಕಾರಣಕ್ಕೆ ಮೂರು ತಿಂಗಳ ಬಳಿಕ ಈಗ ಶುಲ್ಕವನ್ನು ಹಿಂಪಡೆದುಕೊಂಡಿದೆ.
‘ಎಟಿಎಫ್ ಬೆಲೆಗಳಲ್ಲಿ ಇತ್ತೀಚೆಗೆ ಇಳಿಮುಖ ಅಗಿರುವುದರಿಂದ ಇಂಡಿಗೋ ಫುಯಲ್ ಚಾರ್ಜ್ ಅನ್ನು ಹಿಂಪಡೆಯುತ್ತಿದೆ. ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಇಚ್ಛಿಸುತ್ತೇವೆ’ ಎಂದು ವಿಮಾನ ಸಂಸ್ಥೆಯೇ ಖುದ್ದಾಗಿ ಮಾಹಿತಿ ನೀಡಿದೆ. ಇಂಡಿಗೋದ ದೇಶೀಯ ಮತ್ತು ಅಂತರ ದೇಶೀಯ ವಿಮಾನ ಹಾರಾಟ ಎಲ್ಲಕ್ಕೂ ಈ ಹೊಸ ಕ್ರಮ ಅನ್ವಯ ಆಗುತ್ತದೆ.