ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಸ್ತೇರಿ ಬಳಿ ಭಾನುವಾರ ಸಂಭವಿಸಿದ ಭೂಕುಸಿತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಟೆಂಪೊ ಟ್ರಾವಲರ್ ಮೇಲೆ ಭಾರಿ ಬಂಡೆಗಳು ಬಿದ್ದು ಈ ಅನಾಹುತ ಸಂಭವಿಸಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾಂಗ್ಲಾ- ಚಿಟ್ಕುಲ್ ರಸ್ತೆಯ ಬಸ್ತೇರಿ ಬಳಿ ಮಧ್ಯಾಹ್ನ 1.25ಕ್ಕೆ ಭೂಕುಸಿತ ಸಂಭವಿಸಿದೆ. ಬಂಡೆಗಳು ಬಿದ್ದಿದ್ದರಿಂದ ಸೇತುವೆ ಕುಸಿದುಬಿದ್ದಿದೆ. ಪ್ರಯಾಣಿಕರು ಚಿಟ್ಕುಲ್ನಿಂದ ಸಾಂಗ್ಲಾಕ್ಕೆ ಹೋಗುತ್ತಿದ್ದರು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಭೂಕುಸಿತದಿಂದ ಜನರು ಸಾವನ್ನಪ್ಪಿರುವುದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
‘ಗಾಯಾಳುಗಳ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮೃತರ ರಕ್ತಸಂಬಂಧಿಗಳಿಗೆ ತಲಾ ₹2 ಲಕ್ಷ, ಗಾಯಗೊಂಡವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹50 ಸಾವಿರ ಪರಿಹಾರ ನೀಡಲಾಗುತ್ತಿದೆ’ ಎಂದು ಪ್ರಧಾನಿ ತಿಳಿಸಿದ್ದಾರೆ.