ಚಂಡಿಘಡ,ಡಿ.23 : ಹರಿಯಾಣ ಸರ್ಕಾರ ಮದ್ಯ ಸೇವನೆ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಅಬಕಾರಿ ಕಾಯ್ದೆ 2021 ತಿದ್ದುಪಡಿ ಮಸೂದೆಯನ್ನು ನಿನ್ನೆಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಿದ್ದು, ಹರಿಯಾಣ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ಕೂಡ ಈಗ ಮದ್ಯಸೇವನೆ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ಕಾಯ್ದೆಯನ್ನು ಜಾರಿಗೊಳಿಸಿದೆ.
ಈ ಹಿಂದೆ ಹರಿಯಾಣದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ಮದ್ಯ ಖರೀದಿಸಲು ಅಥವಾ ಮಾರಾಟ ಮಾಡಲು ಅವಕಾಶವಿರಲಿಲ್ಲ. ಈ ಕಾಯ್ದೆ ತಿದ್ದುಪಡಿಯಿಂದಾಗಿ 21 ವರ್ಷ ಮೇಲ್ಪಟ್ಟವರು ಮದ್ಯ ಖರೀದಿಸಲು, ಮಾರಾಟ ಮಾಡಲು ಮತ್ತು ಸೇವನೆಗೆ ಅವಕಾಶ ಕಲ್ಪಿಸಿದಂತಾಗಿದೆ.
2021-22ನೇ ಸಾಲಿಗೆ ಅಬಕಾರಿ ನೀತಿ ರೂಪಿಸುವ ಸಮಯದಲ್ಲಿ ಕೆಲವು ರಾಜ್ಯಗಳು ಮದ್ಯ ಸೇವಿಸುವ ವಯಸ್ಸನ್ನು ಕಡಿಮೆ ಮಾಡಿರುವ ಕಾರಣದಿಂದ ವಯಸ್ಸಿನ ಮಿತಿಯನ್ನು 25ರಿಂದ 21 ವರ್ಷಕ್ಕೆ ಇಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹರಿಯಾಣ ಸರ್ಕಾರ ಹೇಳಿದೆ.
21ನೇ ವರ್ಷಕ್ಕೆ ವ್ಯಕ್ತಿ ಪ್ರಬುದ್ದವಾಗಿ ಯೋಚನೆ ಮಾಡುವ ಸಾಮಥ್ರ್ಯ ಹೊಂದಿರುತ್ತಾನೆ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಬದಲಾಗಿವೆ ಎಂಬ ಅಭಿಪ್ರಾಯಕ್ಕೆ ಬಂದಿರುವ ಸರ್ಕಾರ ಈ ಕಾಯ್ದೆಯನ್ನು ಸಮರ್ಥಿಸಿಕೊಂಡಿದೆ.
ಹರಿಯಾಣ ಅಬಕಾರಿ ಕಾಯ್ದೆ 1914ರಲ್ಲಿ ಬರುವ 27, 29, 30 ಮತ್ತು 62ನೇ ಸೆಕ್ಷನ್ಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಈ ಮೂಲಕ 21 ವರ್ಷಕ್ಕೆ ಕನಿಷ್ಠ ವಯೋಮಿತಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮದ್ಯ ಸೇವನೆ ಮಾರಾಟ ಖರೀದಿಯಲ್ಲಿ ಪಾಲ್ಗೊಂಡರೆ ಜೈಲು ಅಥವಾ 50 ಸಾವಿರ ರೂ. ದಂಡ ವಿಸಬಹುದಾಗಿದೆ