ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹಿರಾ ಬೆನ್ ಅವರು ಜೂನ್ 18ರಂದು 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಗುಜರಾತ್ ರಾಜಧಾನಿ ಗಾಂಧಿನಗರದ ರಸ್ತೆಯೊಂದಕ್ಕೆ ಅವರ ಹೆಸರು ಇಡಲಾಗಿದೆ.
ಹಿರಾ ಬೆನ್ ಅವರು ತನ್ನ 100 ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ನಾವು ಮುಂದಿನ ಪೀಳಿಗೆಗೆ ಅವರ ಜೀವನದಿಂದ ಸ್ಫೂರ್ತಿ ಪಡೆಯಲು ರೈಸನ್ ಪ್ರದೇಶದ 80 ಮೀಟರ್ ರಸ್ತೆಗೆ ಹಿರಾ ಮಾರ್ಗ ಎಂದು ಹೆಸರಿಸಲು ನಿರ್ಧರಿಸಿದ್ದೇವೆ ಎಂದು ಗಾಂಧಿನಗರ ಮೇಯರ್ ಹಿತೇಶ್ ಮಕ್ವಾನಾ ತಿಳಿಸಿದ್ದಾರೆ.
ಹಿರಾ ಅವರು ಜೂನ್ 18, 1923ರಂದು ಜನಿಸಿದರು. ನಾಡಿದ್ದು ಜೂನ್ 18 ರಂದು ಗುಜರಾತ್ನಲ್ಲಿರುವ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೋದಿ ಅವರು ಜೂನ್ 18 ರಂದು ಗುಜರಾತ್ಗೆ ಒಂದು ದಿನದ ಭೇಟಿ ನೀಡಲಿದ್ದು, ಅವರು ಪಾವಗಡ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ, ನಂತರ ವಡೋದರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಅಹಮದಾಬಾದ್ನ ಜಗನ್ನಾಥ ದೇವಸ್ಥಾನದಲ್ಲಿ ಮೋದಿ ಕುಟುಂಬವು `ಭಂಡಾರೋ’ (ಸಮುದಾಯ ಭೋಜನ) ಆಯೋಜಿಸಿದೆ.
ವಡ್ನಗರ್ನಲ್ಲಿರುವ ಹಟಕೇಶ್ವರ ಮಹಾದೇವ ದೇವಸ್ಥಾನವು ಪ್ರಧಾನಿಯವರ ತಾಯಿಯ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಮಾರ್ಚ್ನಲ್ಲಿ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ಭೇಟಿ ಮಾಡಿದ್ದರು.