ನವದೆಹಲಿ: ವಿಧಾನಸಭೆ ಒಪ್ಪಿಗೆ ನೀಡಿದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಎಂದು ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ಕಚೇರಿಯಿಂದ ವಿವರಣೆ ಬಯಸಿ ನೋಟಿಸ್ ಜಾರಿ ಮಾಡಿದೆ.
ಮು.ನ್ಯಾ. ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲ & ಮಜೋಜ್ ಮಿಶ್ರಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕೇರಳ ಸರ್ಕಾರದ ಪರ ಹಿರಿಯ ವಕೀಲ ಕೆ.ಕೆ ವೇಣುಗೋಪಾಲ್ ಅವರು ಹಾಜರಾದರು.
ಇದೊಂದು ವ್ಯಾಧಿಯಾಗಿಬಿಟ್ಟಿದೆ. ಸಂವಿಧಾನದ 168 ನೇ ವಿಧಿಯ ಅಡಿಯಲ್ಲಿ ಶಾಸಕಾಂಗದ ಭಾಗವಾಗಿದ್ದಾರೆಂದು ರಾಜ್ಯಪಾಲರು ತಿಳಿದುಕೊಂಡಿರುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು. ಸುಮಾರು 8 ಮಸೂದೆಗಳು ಕಳೆದ 7-21 ತಿಂಗಳಿನಿಂದ ರಾಜ್ಯಪಾಲರ ಬಳಿಯೇ ಇದೆ ಎಂದು ಕೆ.ಕೆ ವೇಣುಗೋಪಾಲ್ ಕೋರ್ಟ್ನ ಗಮನಕ್ಕೆ ತಂದರು. ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುವ ಮೂಲಕ ರಾಜ್ಯಪಾಲರು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿದೆ.