News Karnataka Kannada
Tuesday, May 07 2024
ದೆಹಲಿ

ನವದೆಹಲಿ: ‘ಅಜ್ಞಾತ ಸಂತ ಹರ್ಡೇಕರ್ ಮಂಜಪ್ಪ’ ಪುಸ್ತಕ ಬಿಡುಗಡೆ

New Delhi: A book titled 'Unknown Saint Hardekar Manjappa' released
Photo Credit : News Kannada

ನವದೆಹಲಿ: ಭಾರತ ಸರಕಾರದ ‘ಅಜಾದಿ ಕಾ ಅಮೃತ್ ಮಹೋತ್ಸವ್’ ಯೋಜನೆಯಲ್ಲಿ ನ್ಯಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಕನ್ನಡ ವಿಭಾಗದಲ್ಲಿ ಪ್ರಕಟಿಸಿದ ಅರವಿಂದ ಚೊಕ್ಕಾಡಿಯವರು ಅಧ್ಯಯನ ನಡೆಸಿದ, ‘ ಅಜ್ಞಾತ ಸಂತ ಹರ್ಡೇಕರ್ ಮಂಜಪ್ಪ’ ಕೃತಿಯನ್ನು ನವದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ 27 ಫೆಬ್ರವರಿ 2023 ರಂದು ಬಿಡುಗಡೆಗೊಳಿಸಲಾಯಿತು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ದೆಹಲಿ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.‌ ಟಿ. ಎಸ್. ಸತ್ಯನಾಥ್ ಅವರು, ಕೃತಿಯು ಸರಳವಾಗಿ ಹರ್ಡೇಕರ್ ಮಂಜಪ್ಪ ಅವರ ಜೀವನವನ್ನು ಪರಿಚಯಿಸುತ್ತದೆ. ಅದರಿಂದ ಆಚೆಗೆ ಕೃತಿಯು ಮಂಜಪ್ಪನವರ ವ್ಯಕ್ತಿತ್ವದ ಮಹತ್ವವನ್ನು ಹೇಳುತ್ತದೆ. ಈ ಕೃತಿಯ ಹಿಂದೆ ಅರವಿಂದ ಚೊಕ್ಕಾಡಿಯವರ ಅಪಾರವಾದ ಅಧ್ಯಯನ ಮತ್ತು ಕ್ಷೇತ್ರ ಅಧ್ಯಯನದ ಅನುಭವಗಳಿವೆ. ಹರ್ಡೇಕರ್ ಮಂಜಪ್ಪನವರದೇ ವಿಚಾರದಲ್ಲಿರುವ ವಿಷಯಗಳಲ್ಲೂ ಇಂದಿನ ಅಪ್ರಸ್ತುತವಾಗಿರುವ ಸಂಗತಿಗಳನ್ನು ತಾನು ಬರೆಯುತ್ತಿಲ್ಲ ಎಂದು ಬರೆದಿರುವ ಚೊಕ್ಕಾಡಿಯವರು ಮಂಜಪ್ಪನವರನ್ನು ವರ್ತಮಾನದ ವ್ಯಕ್ತಿತ್ವವಾಗಿ ಸುಂದರ ವಿನ್ಯಾಸದಲ್ಲಿ ಕಂಡರಿಸಿದ್ದಾರೆ. ಮಂಜಪ್ಪನವರ ಕಾಲಮಾನದ ಹಲವು ಕ್ಷೇತ್ರಗಳ ವ್ಯಕ್ತಿತ್ವಗಳು ಮಂಜಪ್ಪನವರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ದಾಖಲೀಕರಿಸಿರುವುದು ಈ ಕೃತಿಯ ವಿಶೇಷತೆಯಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಸಂಚಾಲಕರಾಗಿದ್ದ ಜವಾಹರ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ನಿವೃತ್ತ ಮುಖ್ಯಸ್ಥರೂ, ಸಂಸ್ಕೃತಿ ಚಿಂತಕರೂ ಆದ ಡಾ.‌ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ,” ಗಾಂಧಿ ದೊಡ್ಡ ಪ್ರಮಾಣದ ಪ್ರವಾಸಿ. ಅದನ್ನೆ ಸಣ್ಣ ವ್ಯಾಪ್ತಿಗಿಳಿಸಿದಾಗ ಹರ್ಡೇಕರ್ ಮಂಜಪ್ಪನವರ ಪ್ರವಾಸ ಮತ್ತು ಅನುಭವವಾಗುತ್ತದೆ. ಮಂಜಪ್ಪನವರು ಗಾಂಧಿಯವರ ಕಾಲದ ಆಧುನಿಕ ಚಿಂತನೆ ಮತ್ತು ಹನ್ನೆರಡನೆಯ ಶತಮಾನದ ಶರಣ ಚಿಂತನೆಗಳೆರಡರ ನಡುವೆ ಸಮನ್ವಯವನ್ನು ಸಾಧಿಸಿದವರು. ಸತ್ಯಾಗ್ರಹ ಆಶ್ರಮ ಮತ್ತು ಸತ್ಯಾಗ್ರಹ ಧರ್ಮ ಎರಡೂ ಮಂಜಪ್ಪನವರ ಕಲ್ಪನೆಗಳಾಗಿದ್ದವು. ಸಮಾಜ ಸುಧಾರಣೆಯಲ್ಲಿ ಅವರದು ಮೇರು ವ್ಯಕ್ತಿತ್ವ. ಅರವಿಂದ ಚೊಕ್ಕಾಡಿಯವರು ಶಿಕ್ಷಣ, ಇತಿಹಾಸ, ತತ್ವಶಾಸ್ತ್ರಗಳೆಲ್ಲದರ ಬಗ್ಗೆ ಬರೆಯುತ್ತಿರುವವರು ಮತ್ತು ಮುಖ್ಯ ಅಂಕಣಕಾರರಲ್ಲೊಬ್ಬರು. ಅವರು ಮುಂಡಾಜೆಯ ಸಣ್ಣ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ. ತಾನು ಅವರ ಶಾಲೆಗೆ ಹೋಗಿದ್ದೇನೆ. ಚೊಕ್ಕಾಡಿಯವರು ಹೇಳುವ ಜೀವನ ಮೌಲ್ಯಗಳ ಪ್ರಜ್ಞೆ ಅತ್ಯಂತ ಮಹತ್ವದ್ದಾಗಿದೆ. ಅವರೇ ರೂಪಿಸಿದ ಗಾಂಧಿ ವಿಚಾರ ವೇದಿಕೆಯೂ ಈ ನಿಟ್ಟಿನಲ್ಲಿ ತೊಡಗಿಕೊಂಡಿದ್ದು ಅವರ ನಿಲುವುಗಳು ಹರ್ಡೇಕರ್ ಮಂಜಪ್ಪ ಮತ್ತು ಗಾಂಧಿಯವರೊಂದಿಗೂ ಸ್ಪರ್ಶಿಸುತ್ತವೆ ಎಂದರು.

ಪುಸ್ತಕದ ಹಿನ್ನೆಲೆಯಲ್ಲಿ ಮಾತನಾಡಿದ ಅರವಿಂದ ಚೊಕ್ಕಾಡಿಯವರು,” ಭಾರತದ ಅತ್ಯಂತ ಹತಾಶೆಯ ಕಾಲದಲ್ಲಿ ಗಾಂಧಿ ನಾಯಕರಾಗಿ ಬಂದವರು. ಗಾಂಧಿಯವರ ವೇದಿಕೆಯ ಮೇಲೆ ಇತರ ಆಧುನಿಕ ಚಿಂತನೆಗಳು ಬೆಳೆದವು. ಗಾಂಧಿಯವರ ಚಿಂತನೆಗಳು ಬಹುಮುಖಿಯಾಗಿದ್ದು ಹರ್ಡೇಕರ್ ಮಂಜಪ್ಪ ಅವರೂ ಬಹುಮುಖಿ ಚಿಂತಕರು ಮತ್ತು ಬಹುಮುಖಿ ಕಾರ್ಯ ಸಾಧಕರಾಗಿದ್ದರು. ಹೇಗೆ ಯೋಚಿಸಿದರೆ ಔನ್ನತ್ಯಕ್ಕೆ ಪೂರಕವಾಗಿರುತ್ತದೆ ಎಂಬ ಅರಿವನ್ನು ಬೆಳೆಯಿಸಿದವರು ಮಂಜಪ್ಪ. ಆ ರೀತಿಯ ಆಲೋಚನಾ ಕ್ರಮವೊಂದನ್ನು ರೂಪಿಸುವುದು ಇಂದಿನ ಅಗತ್ಯವೂ ಆಗಿದೆ ಎಂದರು.

ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಜಂಟಿ- ನಿರ್ದೇಶಕರಾದ ನಿರಾ ಜೈನ್ ಸ್ವಾಗತಿಸಿದರು. ಕನ್ನಡ ವಿಭಾಗದ ನಿರ್ವಾಹಕರಾದ ಹೇಮಶ್ರೀ ಅವರು ಕಾರ್ಯಕ್ರಮವನ್ನು ರೂಪಿಸಿದ್ದರು.‌ ಒಂದೂವರೆ ಗಂಟೆಗಳ ಕಾಲ ಕನ್ನಡ ಪುಸ್ತಕದ ಕುರಿತಾಗಿ ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಯಿತು.‌ ಮಂಜಪ್ಪ ಅವರ ಕುರಿತ ಈ ಕೃತಿಯು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು