ನವದೆಹಲಿ: ಪಾಕಿಸ್ತಾನದ ಯುವತಿಯೊಬ್ಬರಿಗೆ ಭಾರತದ ದೆಹಲಿ ಮೂಲದ ವೃದ್ಧರೊಬ್ಬರ ಹೃದಯವನ್ನು ಕಸಿ ಮಾಡುವಲ್ಲಿ ಚೆನ್ನೈನ ಎಂಜಿಎಂ ಹೆಲ್ತ್ಕೇರ್ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ 5 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕ್ ಯುವತಿ ಹೃದಯ ಕಸಿಯ ನಂತರ ಆರೋಗ್ಯವಾಗಿದ್ದು ಮರು ಜೀವ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ 19 ವರ್ಷದ ಆಯೇಷಾ ರಶನ ಅವರು 5 ವರ್ಷದಿಂದ ಹೃದಯ ಸ್ಥಂಭನ ದಿಂದ ಬಳಲುತ್ತಿದ್ದರು. ಹೀಗಾಗಿಯೇ ಅವರು 2019ರಲ್ಲಿಯೇ ಭಾರತಕ್ಕೆ ಆಗಮಿಸಿದ್ದರು. ಸದ್ಯ ಇವರಿಗೆ ದೆಹಲಿ ಮೂಲದ 69 ವರ್ಷದ ವೃದ್ಧರೊಬ್ಬರ ಹೃದಯವನ್ನು ಕಸಿ ಮಾಡಲಾಗಿದೆ. ಆಯೇಷಾ ರಶನ ಅವರಿಗೆ ಹೃದಯ ನೀಡಿರುವ ವೃದ್ಧನು ದೆಹಲಿಯ ಆಸ್ಪತ್ರೆಯೊಂದರಲ್ಲಿ ಬ್ರೈನ್ಡೆಡ್ನಿಂದ ಸಾವನ್ನಪ್ಪಿದ್ದರು. ಇವರ ಹೃದಯವನ್ನೇ ಪಾಕ್ ಯುವತಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಹೃದಯದ ಕಸಿ ಮಾಡಲು ಸುಮಾರು 35 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಚೆನ್ನೈನ ಐಶ್ವರ್ಯನ್ ಟ್ರಸ್ಟ್ ಹಾಗೂ ಆಸ್ಪತ್ರೆ ವೈದ್ಯರೇ ಖರ್ಚು ಭರಿಸಿ, ಉಚಿತವಾಗಿ ಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದೆಹಲಿ ಮೂಲದ ದಾನಿಯಿಂದ ಹೃದಯ ಪಡೆದ ವೈದ್ಯರು, ಆಯೇಷಾಗೆ ಅಳವಡಿಸಿದ್ದಾರೆ. “ಹೃದಯ ಕಸಿ ಬಳಿಕ ನಾನೀಗ ಆರೋಗ್ಯದಿಂದ ಇದ್ದೇನೆ. ಚೆನ್ನೈ ವೈದ್ಯರಿಂದಾಗಿ ನಾನು ಉಸಿರಾಡುತ್ತಿದ್ದೇನೆ. ನನ್ನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆಗಳು. ಪಾಕಿಸ್ತಾನಕ್ಕೆ ತೆರಳಿ ನಾನು ಪದವಿ ಪಡೆಯುತ್ತೇನೆ” ಎಂಬುದಾಗಿ ಆಯೇಷಾ ಹೇಳಿದ್ದಾರೆ.