ನವದೆಹಲಿ: ವರ್ಷದ ಹಿಂದೆ ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಗೂಗಲ್ ಸಂಸ್ಥೆ ಈ ವರ್ಷದ ಆರಂಭದಲ್ಲಿ ನೂರಾರು ಮಂದಿಯನ್ನು ಲೇ ಆಫ್ ಮಾಡಿರುವುದು ವರದಿಯಾಗಿದೆ.
ಹಿಂದೆ ಗೂಗಲ್ ಖರೀದಿ ಮಾಡಿದ್ದ ಫಿಟ್ಬಿಟ್ ಸಂಸ್ಥೆಯ ಇಬ್ಬರೂ ಸಹ-ಸಂಸ್ಥಾಪಕರಾದ ಜೇಮ್ಸ್ ಪಾರ್ಕ್ ಮತ್ತು ಎರಿಕ್ ಫ್ರೈಡ್ಮ್ಯಾನ್ ಗೂಗಲ್ನಿಂದ ನಿರ್ಗಮಿಸಿದ್ದಾರೆ.
ವೆಚ್ಚ ಕಡಿತದ ಭಾಗವಾಗಿ ಗೂಗಲ್ ಈ ಕ್ರಮ ಕೈಗೊಂಡಿದೆ.
ಗೂಗಲ್ನ ವಿವಿಧ ತಂಡಗಳಲ್ಲಿ ಸಿಬ್ಬಂದಿಕಡಿತ ಆಗುತ್ತಿದೆ. ವಾಯ್ಸ್ ಅಸಿಸ್ಟೆಂಟ್ ಯೂನಿಟ್ನಿಂದ ಹಲವರನ್ನು ತೆಗೆಯಲಾಗಿದೆ. ಗೂಗಲ್ನ ಪಿಕ್ಸೆಲ್, ನೆಸ್ಟ್, ಫಿಟ್ಬಿಟ್ ತಂಡಗಳ ಹಾರ್ಡ್ವೇರ್ ಸಿಬ್ಬಂದಿಯಲ್ಲಿ ಹಲವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅದರಲ್ಲೂ ಗೂಗಲ್ನ ಆಗ್ಮೆಂಟೆಡ್ ರಿಯಾಲಿಟಿ ಅಥವಾ ಎಆರ್ ತಂಡದ ಹೆಚ್ಚಿನ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸ ವರ್ಷದ ಲೇ ಆಫ್ನಲ್ಲಿ ಹೆಚ್ಚು ಬಾಧಿತರಾಗಿರುವುದು ಸೆಂಟ್ರಲ್ ಎಂಜಿನಿಯರಿಂಗ್ ಟೀಮ್.
ಆದರೆ, ಒಟ್ಟಾರೆಯಾಗಿ ಎಷ್ಟು ಮಂದಿ ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಸಾವಿರದ ಆಸುಪಾಸು ಇರಬಹುದು ಎಂದು ವರದಿ ಸುಳಿವು ನೀಡುತ್ತಿದೆ.