ನವದೆಹಲಿ: ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಜಾಲತಾಣ ಎಕ್ಸ್ ಕಾರ್ಪ್, ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದಲ್ಲಿ 2,12,627 ಖಾತೆಗಳನ್ನು ನಿಷೇಧಿಸಿದೆ. ಈ ಮೂಲಕ ಎಕ್ಸ್ ಭಾರತದಲ್ಲಿ ಹೊಸ ಮಾದರಿಯನ್ನು ಸ್ಥಾಪಿಸಿದೆ. ಕಂಪನಿಯ ಪಾಲಿಸಿ ಉಲ್ಲಂಘಿಸಿ ಮಕ್ಕಳ ಲೈಂಗಿಕ ಶೋಷಣೆ, ಒಪ್ಪಿಗೆಯಿಲ್ಲದ ನಗ್ನತೆಯ ಕಂಟೆಂಟ್ಗಳನ್ನು ಹಾಕಿದ ಖಾತೆಗಳ ಮೇಲೆ ಏಕ್ಸ್ ಗಮನಾರ್ಹವಾದ ಶಿಸ್ತುಕ್ರಮವನ್ನು ತೆಗೆದುಕೊಂಡಿದೆ.
ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್, ದೇಶದಲ್ಲಿ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ 1,235 ಅಕೌಂಟ್ಗಳನ್ನು ತೆಗೆದುಹಾಕಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ಭಯೋತ್ಪಾದನೆಯನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಎಕ್ಸ್ ಜಾರಿಗೆ ತಂದಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಭಾರತದಲ್ಲಿನ ಬಳಕೆದಾರರಿಂದ 5,158 ದೂರುಗಳನ್ನು ಸ್ವೀಕರಿಸಿದೆ ಎಂದು ತನ್ನ ಮಾಸಿಕ ವರದಿಯಲ್ಲಿ ಹೇಳಿದೆ. ಭಾರತದಿಂದ ಬಂದ ಹೆಚ್ಚಿನ ದೂರುಗಳು ವಂಚನೆ (3,074), ಸೂಕ್ಷ್ಮ ವಯಸ್ಕ ವಿಷಯ (953), ದ್ವೇಷಪೂರಿತ ನಡವಳಿಕೆ (412), ನಿಂದನೆ/ಕಿರುಕುಳ (359) ದೂರುಗಳನ್ನು ಹೊಂದಿವೆ.