ಗುವಾಹಟಿ: ಈ ವರ್ಷಾಂತ್ಯದೊಳಗೆ ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್ಎಸ್ಪಿಎ) ಸಂಪೂರ್ಣವಾಗಿ “ಹಿಂತೆಗೆದುಕೊಳ್ಳುವ” ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ಇಲ್ಲಿನ ಖಾನಪಾರ ಆಟದ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಈಗ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಎಎಫ್ಎಸ್ಪಿಎ ಜಾರಿಯಲ್ಲಿದೆ. ಈ ವರ್ಷಾಂತ್ಯದೊಳಗೆ ರಾಜ್ಯದಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್ಎಸ್ಪಿಎ)ಯನ್ನು ಸಂಪೂರ್ಣವಾಗಿ ಹಿಂಪಡೆಯುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
ಅಸ್ಸಾಂನಲ್ಲಿ ಹಿಂದಿನ ಸರ್ಕಾರಗಳು 62 ಬಾರಿ ಎಎಫ್ಎಸ್ಪಿಎ ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದವು. ನಮ್ಮ ಅಧಿಕಾರಾವಧಿಯಲ್ಲಿ ಸುಮಾರು 8000 ಉಗ್ರಗಾಮಿಗಳು ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಅಸ್ಸಾಂ ಅನ್ನು ‘ಡ್ರಗ್ಸ್ ಮುಕ್ತ’, ‘ಭ್ರಷ್ಟಾಚಾರ ಮುಕ್ತ’ ರಾಜ್ಯವನ್ನಾಗಿ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.