ಆಂಧ್ರಪ್ರದೇಶದಲ್ಲಿ ಗುಲಾಬ್ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಇದರ ಪರಿಣಾಮ ಇನ್ನೆರಡು ದಿನ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಇನ್ನೆರಡು ದಿನ ಮುಂಗಾರು ಮುಂದುವರೆಯಲಿದೆ.
ಕರಾವಳಿ ಜಿಲ್ಲೆ, ಮಲೆನಾಡು, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಶಿವಮೊಗ್ಗ, ಹಾಸನ, ಕೊಡಗು, ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಹಾವೇರಿ, ವಿಜಯಪುರದಲ್ಲಿ ಇಂದು ಮಳೆಯಾಗಲಿದೆ.