ಇಂದು ‘ಹಿಂದಿ ದಿನ’. ಈ ಹಿನ್ನೆಲೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಶುಭಾಶಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನಿಮಗೆಲ್ಲರಿಗೂ ‘ಹಿಂದಿ ದಿವಸ್’ ಹಬ್ಬದ ಶುಭಾಶಯಗಳು. ಹಿಂದಿಯನ್ನು ಸಮರ್ಥ ಭಾಷೆಯನ್ನಾಗಿಸುವಲ್ಲಿ ವಿವಿಧ ಪ್ರದೇಶಗಳ ಜನರು ಗಮನಾರ್ಹ ಪಾತ್ರ ವಹಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಹಿಂದಿ ತನ್ನ ಬಲವಾದ ಗುರುತನ್ನು ನಿರಂತರವಾಗಿ ಮೂಡಿಸಿರುವುದು ನಿಮ್ಮ ಎಲ್ಲಾ ಪ್ರಯತ್ನಗಳ ಫಲಿತಾಂಶವಾಗಿದೆ’ ಎಂದು ಹೇಳಿದ್ದಾರೆ.
‘ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮ. ನಮ್ಮ ಸಾಂಸ್ಕೃತಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಮೂಲ ಆಧಾರವಾಗಿರುವ ಹಿಂದಿ ಸಹ ಪ್ರಾಚೀನ ನಾಗರೀಕತೆ ಮತ್ತು ಆಧುನಿಕ ಪ್ರಗತಿಯ ನಡುವಿನ ಸೇತುವೆಯಾಗಿದೆ. ಮೋದಿಯವರ ನಾಯಕತ್ವದಲ್ಲಿ ನಾವು ಹಿಂದಿ ಮತ್ತು ಎಲ್ಲಾ ಭಾರತೀಯ ಭಾಷೆಗಳ ಸಮಾನಾಂತರ ಅಭಿವೃದ್ಧಿಗೆ ನಿರಂತರವಾಗಿ ಬದ್ಧರಾಗಿದ್ದೇವೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
‘ಹಿಂದಿ ದಿವಸ್ ಸಂದರ್ಭದಲ್ಲಿ, ಎಲ್ಲಾ ದೇಶವಾಸಿಗಳು ಮೂಲ ಕೃತಿಗಳಲ್ಲಿ ತಮ್ಮ ಮಾತೃ ಭಾಷೆಯೊಂದಿಗೆ ಅಧಿಕೃತ ಭಾಷೆ ಹಿಂದಿಯನ್ನು ಕ್ರಮೇಣವಾಗಿ ಬಳಸುವುದಾಗಿ ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಮಾತೃಭಾಷೆ ಮತ್ತು ಅಧಿಕೃತ ಭಾಷೆಯ ಸಮನ್ವಯದಲ್ಲಿ ಭಾರತದ ಪ್ರಗತಿ ಅಡಕವಾಗಿದೆ. ನಿಮಗೆಲ್ಲರಿಗೂ ‘ಹಿಂದಿ ದಿವಸ್’ ಹಬ್ಬದ ಶುಭಾಶಯಗಳು’ ಎಂದು ಮತ್ತೊಂದು ಟ್ವೀಟ್ ನಲ್ಲಿ ಶಾ ಶುಭಾಶಯ ಕೋರಿದ್ದಾರೆ.