ಕೊರೋನಾ ವಿರುದ್ಧ ಹೋರಾಡಲು ವಿಶ್ವದ ಹಲವು ರಾಷ್ಟ್ರಗಳು ಲಸಿಕೆಯ ಬೂಸ್ಟರ್ ಡೋಸ್ ಕೊಡುತ್ತಿವೆ. ಭಾರತದಲ್ಲಿಯೂ ಕೋವಿಡ್ ಲಸಿಕೆಯ 2 ಡೋಸ್ ಪಡೆದ 6 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಭಾರತ್ ಬಯೋಟೆಕ್ ನ ಮುಖ್ಯಸ್ಥ ಕೃಷ್ಣ ಎಲ್ಲ ಅವರು ತಿಳಿಸಿದ್ದಾರೆ.
ಈ ವೇಳೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ನೇಸಲ್ ಲಸಿಕೆ ಕುರಿತು ಮಾತನಾಡಿದ ಅವರು, ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಬಳಿಕ ಎರಡನೇ ಡೋಸ್ ಆಗಿ ಈ ನೇಸಲ್ ಲಸಿಕೆ ನೀಡಲು ಚಿಂತನೆ ನಡೆಸಲಾಗುತ್ತಿದೆ. ನೇಸಲ್ ಡೋಸ್ ಪಡೆಯುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದರು.
ಇತ್ತೀಚೆಗಷ್ಟೆ ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಲಸಿಕೆ ಕೋವಿಡ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ರೂಪಾಂತರಿ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಎಂದು ಸಂಸ್ಥೆ ತಿಳಿಸಿದೆ.