News Karnataka Kannada
Friday, May 03 2024
ದೇಶ

ಕೇಂದ್ರ ಸರಕಾರದಿಂದ ಇಂಧನ ಸಂರಕ್ಷಣಾ ಕಾಯ್ದೆ-2001ಕ್ಕೆ ತಿದ್ದುಪಡಿ ಪ್ರಸ್ತಾಪ

Central Home Department
Photo Credit :

ಹೆಚ್ಚುತ್ತಿರುವ ಇಂಧನ ಅಗತ್ಯಗಳು ಮತ್ತು ಜಾಗತಿಕ ಹವಾಮಾನ ಬದಲಾವಣೆಯ ನಡುವೆ ಭಾರತ ಸರಕಾರವು ಇಂಧನ ಸಂರಕ್ಷಣಾ ಕಾಯ್ದೆ-2001ಕ್ಕೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.

ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸಲು ಸಹ ಈ ಪ್ರಸ್ತಾಪಗಳು ನೆರವಾಗಲಿವೆ. ಗರಿಷ್ಠ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಹೊಸ ಕ್ಷೇತ್ರಗಳನ್ನು ಗುರುತಿಸಿದೆ. ಕೈಗಾರಿಕೆ, ಕಟ್ಟಡಗಳು, ಸಾರಿಗೆ ಮುಂತಾದ ವಲಯಗಳ ಅಂತಿಮ ಬಳಕೆಗಾಗಿ ನವೀಕರಿಸಬಹುದಾದ ಇಂಧನದ ಬೇಡಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಇಂಧನ ಸಚಿವಾಲಯವು ಸಂಬಂಧಪಟ್ಟ ವಿವಿಧ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಬಳಿಕ ಈ ತಿದ್ದುಪಡಿಗಳನ್ನು ಅಂತಿಮಗೊಳಿಸಿದೆ. ಕೈಗಾರಿಕಾ ಘಟಕಗಳು ಅಥವಾ ಯಾವುದೇ ಸಂಸ್ಥೆಯಿಂದ ಒಟ್ಟಾರೆ ವಿದ್ಯುತ್‌ ಬಳಕೆಯಲ್ಲಿ ನವೀಕರಿಸಬಹುದಾದ ಇಂಧನದ ಕನಿಷ್ಠ ಪಾಲಿನ ವ್ಯಾಖ್ಯಾನವನ್ನೂ ಈ ಪ್ರಸ್ತಾಪವು ಒಳಗೊಂಡಿದೆ.

ʻಇಂಗಾಲ ಉಳಿತಾಯ ಪ್ರಮಾಣಪತ್ರʼದ ಮೂಲಕ ಶುದ್ಧ ಇಂಧನ ಮೂಲಗಳನ್ನು ಬಳಸುವ ಪ್ರಯತ್ನಗಳನ್ನು ಉತ್ತೇಜಿಸಲು ಇದರಲ್ಲಿ ಅವಕಾಶವಿದೆ. ಗೌರವಾನ್ವಿತ ಇಂಧನ ಸಚಿವ ಆರ್.ಕೆ. ಸಿಂಗ್ ಅವರು ಇತ್ತೀಚೆಗೆ ಉದ್ದೇಶಿತ ತಿದ್ದುಪಡಿಗಳನ್ನು ಪರಿಶೀಲಿಸಿ, ಸಂಬಂಧಿತ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯ ಸರಕಾರಗಳಿಂದ ಪ್ರತಿಕ್ರಿಯೆಗಳು ಹಾಗೂ ಸಲಹೆಗಳನ್ನು ಪಡೆಯಲು ನಿರ್ದೇಶಿಸಿದ್ದಾರೆ.

ಅದರಂತೆ, ʻಇಸಿʼ ಕಾಯ್ದೆಯಲ್ಲಿ ಉದ್ದೇಶಿತ ತಿದ್ದುಪಡಿಗಳಿಗೆ ಅಂತಿಮ ರೂಪ ನೀಡಲು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್‌ ಕುಮಾರ್‌ ಅವರು ಸಭೆ ನಡೆಸಿದ್ದಾರೆ.

ಕಾಯ್ದೆಯನ್ನು ವಿವರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ, ಸಂಭಾವ್ಯ ತಿದ್ದುಪಡಿಗಳ ಬಗ್ಗೆ ಚರ್ಚಿಸಲು ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸಲು ವಿವಿಧ ಮಧ್ಯಸ್ಥಗಾರರೊಂದಿಗೆ ನಾಲ್ಕು ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಚರ್ಚೆ ಮತ್ತು ಪಾಲುದಾರರ ಸಮಾಲೋಚನೆಗಳ ಜೊತೆಗೆ, ಕಾಯ್ದೆಯ ಅಡಿಯಲ್ಲಿ ಮೂಲತಃ ಉದ್ದೇಶಿಸಲಾದ ಸಂಸ್ಥೆಗಳನ್ನು ಬಲಪಡಿಸಲು ಈ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

ಉದ್ದೇಶಿತ ತಿದ್ದುಪಡಿಗಳು ಭಾರತದಲ್ಲಿ ಇಂಗಾಲದ ಮಾರುಕಟ್ಟೆಯ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲಿವೆ. ಜೊತೆಗೆ ನೇರವಾಗಿ ಅಥವಾ ಗ್ರಿಡ್ ಮೂಲಕ ಪರೋಕ್ಷವಾಗಿ ನವೀಕರಿಸಬಹುದಾದ ಇಂಧನದ ಕನಿಷ್ಠ ಬಳಕೆಯ ಮಿತಿಯನ್ನು ಈ ಪ್ರಸ್ತಾಪಗಳು ಸೂಚಿಸುತ್ತವೆ. ಪಳೆಯುಳಿಕೆ ಆಧಾರಿತ ಇಂಧನದ ಬಳಕೆ ಮತ್ತು ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಈ ಪ್ರಸ್ತಾಪಗಳು ಸಹಾಯ ಮಾಡುತ್ತವೆ.

ಜಾಗತಿಕ ಹವಾಮಾನ ಬದಲಾವಣೆ ಸವಾಲನ್ನು ಎದುರಿಸುವಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದೆ. 2005ರಲ್ಲಿದ್ದ ಮಟ್ಟಗಳಿಗೆ ಹೋಲಿಸಿದರೆ 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆ ತೀವ್ರತೆಯನ್ನು ಶೇ. 33-35ರಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ʻರಾಷ್ಟ್ರೀಯ ನಿರ್ಧಾರಿತ ಕೊಡುಗೆʼಗಳಿಗೆ (ಎನ್‌ಡಿಸಿಗಳು) ಭಾರತ ಬದ್ಧವಾಗಿದೆ.

2030ರ ವೇಳೆಗೆ ಪಳೆಯುಳಿಕೆಯೇತರ ಮೂಲಗಳಿಂದ ಶೇ. 40ಕ್ಕೂ ಹೆಚ್ಚು ಸಂಚಿತ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಭಾರತ ಬದ್ಧವಾಗಿದೆ ಎಂದು ವಿದ್ಯುತ್ ಸಚಿವಾಲಯವು ಒತ್ತಿ ಹೇಳಿದೆ. ಇದಲ್ಲದೇ ಇಂಧನ ದಕ್ಷತೆ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಭಾರತವು 2030ರ ವೇಳೆಗೆ ಸುಮಾರು 550 ಮೆಟ್ರಿಕ್‌ ಟನ್‌ ಇಂಗಾಲವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ʻಇಸಿʼ ಕಾಯ್ದೆಗೆ ಉದ್ದೇಶಿತ ಬದಲಾವಣೆಗಳಿಂದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಶುದ್ಧ ತಂತ್ರಜ್ಞಾನಗಳ ಅಳವಡಿಕೆ ಹೆಚ್ಚಾಗಲಿದೆ. ಈ ನಿಬಂಧನೆಗಳು ಕೈಗಾರಿಕೆಗಳು ಪ್ರಸ್ತುತ ಬಳಸುತ್ತಿರುವ ಪಳಿಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಹಸಿರು ಹೈಡ್ರೋಜನ್ ಬಳಕೆಯನ್ನು ಉತ್ತೇಜಿಸಲು ಅನುಕೂಲ ಮಾಡಿಕೊಡಲಿದೆ.

ಶುದ್ಧ ಇಂಧನ ಬಳಕೆ ತಂತ್ರಜ್ಞಾನಗಳ ಅನುಷ್ಠಾನಕ್ಕಾಗಿ ʻಕಾರ್ಬನ್ ಕ್ರೆಡಿಟ್ʼಗಳ ರೂಪದಲ್ಲಿ ನೀಡಲಾಗುವ ಹೆಚ್ಚುವರಿ ಪ್ರೋತ್ಸಾಹಕಗಳಿಂದ ಹವಾಮಾನ ಸಂಬಂಧಿತ ಉಪಕ್ರಮಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಕಾರಣವಾಗಲಿವೆ. ಸುಸ್ಥಿರ ಆವಾಸ ಸ್ಥಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ದೊಡ್ಡ ವಸತಿ ಕಟ್ಟಡಗಳಿಗೂ ಕಾಯ್ದೆಯ ವ್ಯಾಪ್ತಿ ವಿಸ್ತರಣೆಯನ್ನು ಈ ಪ್ರಸ್ತಾಪವು ಒಳಗೊಂಡಿದೆ.

ಇಂಧನದ ಅಗತ್ಯತೆ ಅನಿವಾರ್ಯವಾಗಿದೆ ಮತ್ತು ವ್ಯಾಪಾರ ಬದಲಾವಣೆಯ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಮತ್ತಷ್ಟು ಒತ್ತಡ ಹೇರದೆಯೇ ಇಂಧನ-ದಕ್ಷ ರಾಷ್ಟ್ರವಾಗಿ ಬದಲಾಗುವುದು ಇನ್ನೂ ಹೆಚ್ಚು ಅನಿವಾರ್ಯವಾಗಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಹೇಳಿದೆ.

ʻಇಸಿ ಕಾಯ್ದೆ-2001ʼರ ತಿದ್ದುಪಡಿಯೊಂದಿಗೆ, ನಮ್ಮ ಪ್ಯಾರಿಸ್ ಬದ್ಧತೆಗಳಿಗೆ ಕೊಡುಗೆ ನೀಡಲು ಮತ್ತು ನಮ್ಮ ʻಎನ್‌ಡಿಸಿʼಗಳನ್ನು ಸಕಾಲದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಂಸ್ಥೆಗಳಿಗೆ ಅಧಿಕಾರ ನೀಡುವತ್ತ ಗಮನ ಹರಿಸಲಾಗಿದೆ ಎಂದು ಇಂಧನ ಸಚಿವಾಲಯ ವಿವರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು