ಇಂದಿನಿಂದ ಕೇಂದ್ರ ಸರ್ಕಾರವು ಕೋವಿಡ್ ಸೋಂಕಿನ ವಿರುದ್ಧ ‘ಹರ್ ಘರ್ ದಸ್ತಕ್’ ಮೆಗಾ-ಲಸಿಕೆ ಅಭಿಯಾನವನ್ನು ಆರಂಭಿಸಿದ್ದು, ಲಸಿಕೆ ಪಡೆಯದವರಿಗೆ ಮನೆ ಬಾಗಿಲಲ್ಲೇ ವಾಕ್ಸಿನ್ ಸಿಗಲಿದೆ.
ಕಳೆದವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೋವಿಡ್ -19 ಪರಿಶೀಲನಾ ಸಭೆಯ ನಡೆಸಿದ್ದು, ಕೊರೋನಾ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲು ‘ಹರ್ ಘರ್ ದಸ್ತಕ್’ ಅಭಿಯಾನದ ಕುರಿತು ಮಾಹಿತಿ ನೀಡಿದ್ದರು.
“ನವೆಂಬರ್ ಒಂದು ತಿಂಗಳು ನಾವು ‘ಹರ್ ಘರ್ ದಸ್ತಕ್’ ಎಂಬ ಮೆಗಾ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಿದ್ದೇವೆ. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ” ಎಂದು ಮಾಂಡವಿಯಾ ಹೇಳಿದ್ದರು.
“ದೇಶದಲ್ಲಿ ಶೇ.77ರಷ್ಟು ಜನ ಮೊದಲ ಡೋಸ್ ಪಡೆದಿದ್ದಾರೆ. ಶೇ. 32ರಷ್ಟು ಜನ ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ. ಸುಮಾರು 10 ಕೋಟಿಗೂ ಅಧಿಕ ಮಂದಿ ಎರಡನೇ ಡೋಸ್ ಪಡೆಯದ ಹಿನ್ನೆಲೆ ‘ಹರ್ ಘರ್ ದಸ್ತಕ್’ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು” ಎಂದು ತಿಳಿಸಿದ್ದರು.