ನೇಪಾಳ: ಪ್ರಯಾಣಿಕರ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ 18 ಮಂದಿ ಮೃತಪಟ್ಟಿರುವ ಘಟನೆ ಸೋಮವಾರ ಮುಂಜಾನೆ ದಕ್ಷಿಣ ಏಷ್ಯಾದ ನೇಪಾಳದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಬೆಳಿಗ್ಗೆ 1.30ರ ಸುಮಾರಿಗೆ ಪೃಥ್ವಿ ಹೈವೇ ಮೂಲಕ ಸಾಗುತ್ತಿದ್ದ ಬಸ್ ಧಾಡಿಂಗ್ ಜಿಲ್ಲೆಯ ಭೈನ್ಸಿಗೌಡಾ ಬಳಿಯ ಬೆನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ–5 ಸಮೀಪದ ತ್ರಿಶೂಲಿ ನದಿಗೆ ಉರುಳಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ನದಿಗೆ ಉರುಳಿದ್ದು, ಈ ದುರ್ಘಟನೆಯಲ್ಲಿ ಸುಮಾರು 18 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಜೊತೆಗೆ 24 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ವರದಿಗಳ ಪ್ರಕಾರ, ಬೆಳಿಗ್ಗೆ ವೇಳೆಗೆ 17 ಶವಗಳನ್ನು ಹೊರತೆಗೆಯಲಾಗಿದೆ. ಉಳಿದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ.
ಸೋಮವಾರ ಬೆಳಿಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಾಣಿಸಲಾಗಿದೆ. ಅಪಘಾತದ ನಿಖರ ಕಾರಣವನ್ನು ತನಿಖೆಯ ಬಳಿಕವಷ್ಟೇ ಹೊರಬರಬೇಕಿದೆ.

