ಬೆಂಗಳೂರು : ಸುಗಂಧ ದ್ರವ್ಯಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೆಂಗಳೂರು ಹೊರವಲಯದಲ್ಲಿನ ನೆಲಮಂಗಲ ತಾಲೂಕಿನ ಮಾಕಳಿ ಬಳಿ ನಡೆದಿದೆ.

ರವಿವಾರ ಬೆಳಗ್ಗೆ 11:30ರ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಿಂದ ಸಂಗ್ರಹಿಸಿದ್ದ ಸುಗಂಧ ದ್ರವ್ಯಗಳು ನಾಶವಾಗಿವೆ. ವೇಗವಾಗಿ ಹರಡಿದ ಬೆಂಕಿ ಕೇವಲ ಒಂದು ಗಂಟೆಯೊಳಗೆ ಅಕ್ಕ ಪಕ್ಕದ ಮೂರರಿಂದ ನಾಲ್ಕು ಗೋದಾಮುಗಳಿಗೆ ವ್ಯಾಪಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಅಗ್ನಿ ಅವಘಡದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಕಾರ್ಮಿಕರಿಗೆ ಗಾಯಗಳಾಗಿವೆ. ವೇರ್ ಹೌಸ್‍ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಗೋದಾಮುಗಳಲ್ಲಿ ನಾಯಿಗಳ ಆಹಾರ ಸಂಗ್ರಹಿಸುವ ಪೆಡಿಗ್ರಿ ಗೋದಾಮು ಸೇರಿವೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಶೇಷವಾಗಿ, ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಎಚ್‍ಪಿ ಗ್ಯಾಸ್ ಸಿಲಿಂಡರ್ ಸಂಗ್ರಹವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.