ಟೆಹ್ರಾನ್ : ಇರಾನ್ ಮೇಲೆ ಇಸ್ರೇಲ್, ಅಮೆರಿಕ ಜಂಟಿಯಾಗಿ ಯುದ್ಧ ಸಾರಿದ್ದು 30 ಕಡೆ ದಾಳಿ ನಡೆಸಿ ನಗರಗಳನ್ನ ಉಡೀಸ್ ಮಾಡಿದ್ವು. ಇದಕ್ಕೆ ಇರಾನ್ ಕೂಡ ಪ್ರತ್ಯುತ್ತರ ಕೊಟ್ಟಿದ್ದು ದೊಡ್ಡಣ್ಣನ ಸೇನಾ ನೆಲೆಗಳನ್ನೇ ಧ್ವಂಸ ಮಾಡಿದೆ. ಇದೀಗ ಇರಾನ್ನ ಸರ್ವೋಚ್ಛ ನಾಯಕನನ್ನೇ ಮಿತ್ರಪಡೆಗಳು ಹತ್ಯೆಗೈದಿವೆ. ಖಮೇನಿ ಸಾವಿನ ಬೆನ್ನಲ್ಲೇ ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಸಾಕಷ್ಟು ನಕರಾತಕ ಪರಿಣಾಮ ಬೀರಲಿದ್ದು, ಹೊರ್ಮುಜ್ ಜಲಸಂಧಿಯಿಂದ ಸರಬರಾಜಾಗುತ್ತಿದ್ದ ತೈಲಕ್ಕೆ ಸದ್ಯಕ್ಕೆ ಬ್ರೇಕ್ ಬೀಳಲಿದ್ದು, ತೈಲ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ.
ವಾಣಿಜ್ಯ ಉದ್ದೇಶದ ಸರಕು ಸಾಗಣೆಗೆ ಹೊರ್ಮುಜ್ ಜಲಸಂಧಿಯು ಸುರಕ್ಷಿತವಲ್ಲ ಎಂಬ ಸನ್ನಿವೇಶವನ್ನು ಇರಾನ್ ಸೃಷ್ಟಿಸಿದರೆ ಮಾರುಕಟ್ಟೆಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ. ಈ ಜಲಸಂಧಿಯ ಮೂಲಕ 2025ರಲ್ಲಿ ಪ್ರತಿದಿನ 1.4 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಾಗಣೆ ಆಗಿತ್ತು. ಇದು ಜಾಗತಿಕವಾಗಿ ಸಮುದ್ರ ಮಾರ್ಗವಾಗಿ ಸಾಗಣೆ ಆಗುವ ಒಟ್ಟು ಕಚ್ಚಾ ತೈಲದ ಅಂದಾಜು ಶೇ 33ರಷ್ಟಿದೆ.
ಅಮೆರಿಕ-ಇರಾನ್ ಸಂಘರ್ಷದಿಂದ ತೈಲ ಸರಬರಾಜಿನಲ್ಲಿ ಏರುಪೇರಾಗುವ ಆತಂಕ ಎದುರಾಗಿದೆ. ಹೊರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಸಾಗಣೆಗೆ ಅಡ್ಡಿಯಾಗಿದೆ. ಈ ನಡುವೆ, ಸಂಘರ್ಷದಿಂದ ಭಾರತಕ್ಕೆ ಹೆಚ್ಚಿನ ತೈಲ ಅಭಾವದ ಅಪಾಯವಿಲ್ಲ. ಮುಂದಿನ 74 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದೆ ಎಂದು ಸರಕಾರ ಹೇಳಿಕೊಂಡಿದೆ.
ಕಾರ್ಯತಂತ್ರ ಭಾಗವಾಗಿ ಸಾಕಷ್ಟು ತೈಲ ಸಂಗ್ರಹ ಮಾಡಿಕೊಳ್ಳಲಾಗಿದೆ. ದೇಶಕ್ಕೆ ಅಗತ್ಯ ಇರುವ ತೈಲ ಪೂರೈಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 74 ದಿನಗಳ ಕಾಲ ದೇಶಿಯವಾಗಿ ಯಾವುದೇ ತೈಲದ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಸವಾಲು, ಪರಿಣಾಮ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯುದ್ಧದ ಪರಿಸ್ಥಿತಿ ಅವಲೋಕಿಸಿ ತೈಲ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹೊರ್ಮುಜ್ ಜಲಸಂಧಿಯು ಕೊಲ್ಲಿ ರಾಷ್ಟ್ರಗಳನ್ನು ಹಿಂದೂ ಮಹಾಸಾಗರದ ಜೊತೆ ಸಂಪರ್ಕಿಸುತ್ತದೆ. 50 ಕಿ.ಮೀ. ಅಗಲವಾಗಿರುವ, 200 ಅಡಿಯಷ್ಟು ಆಳದ ಇದನ್ನು ಮಿಲಿಟರಿ ಬಲ ಬಳಸಿ ಸರಕು ಸಾಗಣೆ ಸಾಧ್ಯವಾಗದಂತೆ ಮಾಡಿಬಿಡಬಹುದು. ಅಮೆರಿಕದ ‘ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್’ (ಇಐಎ) ಸಂಸ್ಥೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಎಲ್‌ಎನ್‌ಜಿಯ ಶೇ 20ರಷ್ಟು ವಹಿವಾಟು ಈ ಜಲಸಂಧಿಯ ಮೂಲಕ ಆಗುತ್ತದೆ.

