ಒಮಾನ್: ಒಮಾನ್ ಸಮೀಪದ ಹೊರ್ಮುಜ್ ಜಲಸಂಧಿಯಲ್ಲಿ ಜಲಬಾಂಬ್ಗಳಿಗೆ ತಗುಲಿ ತೈಲ ಟ್ಯಾಂಕರ್ ಹೊತ್ತಿ ಉರಿದಿದೆ ಎಂದು ವರದಿಯಾಗಿದೆ
ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ ಎಂದು ಬ್ರಿಟನ್ನ ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಿಳಿಸಿದೆ. ಘಟನೆಯ ಪರಿಣಾಮ ಟ್ಯಾಂಕರ್ನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನ ಸಂಚಾರ ಸ್ಥಗಿತಗೊಂಡಿದೆ. ಹಡಗಿಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ಇರಾನ್ ನೌಕಾಪಡೆ ದೃಢಪಡಿಸಿದೆ. ಆದರೆ, ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಇರಾನ್ ನೌಕಾಪಡೆ, ಟ್ಯಾಂಕರ್ ನಿಷೇಧಿತ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಅಲ್ಲದೆ, ಹಡಗಿನ ನ್ಯಾವಿಗೇಷನ್ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಆರೋಪಿಸಿದೆ. ಇರಾನ್ ಸರ್ಕಾರಿ ಪ್ರಸಾರ ಸಂಸ್ಥೆ IRIB ಪ್ರಕಾರ, ‘ಹೊರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿರುವ ನಿರ್ಬಂಧಿತ ಪ್ರದೇಶದಲ್ಲಿ ಇರಾನ್ ನೌಕಾಪಡೆಗೆ ಯಾವುದೇ ಮಾಹಿತಿ ನೀಡದೆ ಟ್ಯಾಂಕರ್ ಸಂಚರಿಸುತ್ತಿತ್ತು. ಈ ರೀತಿಯ ಉಲ್ಲಂಘನೆ ಮಾಡಿದರೆ, ಇಂತಹ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ನೌಕಾಪಡೆ ಎಚ್ಚರಿಸಿದೆ.
ಈ ಪ್ರದೇಶದಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇರಾನ್ ಪಡೆಗಳೊಂದಿಗೆ ಸಮನ್ವಯ ಅಗತ್ಯ. ಹೀಗಾಗಿ ಎಲ್ಲ ಹಡಗುಗಳು ನಿಗದಿಪಡಿಸಿದ ಸಮುದ್ರ ಮಾರ್ಗ ಮತ್ತು ನಿಯಮಗಳನ್ನು ಪಾಲಿಸಬೇಕು ಎಂದು ಇರಾನ್ ಸೂಚಿಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ಹಡಗುಗಳ ಮೇಲಿನ ದಾಳಿಯ ಸರಣಿ ಮುಂದುವರಿದಿದೆ. ಈ ಘಟನೆಗೂ ಒಂದು ದಿನ ಮೊದಲು ಇದೇ ರೀತಿಯ ಘಟನೆ ನಡೆದಿತ್ತು ಎಂದು UKMTO ಮಾಹಿತಿ ನೀಡಿತ್ತು.
ಸೋಮವಾರ ಹೊರ್ಮುಜ್ ಜಲಸಂಧಿಯಲ್ಲಿ ಜಲಬಾಂಬ್ಗಳಿಗೆ ತಗುಲಿ ಮೂರು ತೈಲ ಟ್ಯಾಂಕರ್ಗಳು ಹೊತ್ತಿ ಉರಿದಿದ್ದವು. ನಿಷೇಧಿತ ಮಾರ್ಗದ ಮೂಲಕ ಸಾಗಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಇರಾನ್ ಆರೋಪಿಸಿತ್ತು.

