ವಾಲ್‌ನಟ್ಸ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಪೂರಕವಾಗಬಹುದು.

ಆರೋಗ್ಯಕರ ಆಹಾರ ಪದ್ಧತಿಯಲ್ಲಿ ಡ್ರೈಫ್ರೂಟ್ಸ್‌ಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ವಾಲ್‌ನಟ್ಸ್ ಅಥವಾ ಅಕ್ರೋಟ್ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ.

ಮೆದುಳಿನ ಆಕಾರವನ್ನು ಹೋಲುವ ವಾಲ್‌ನಟ್ಸ್‌ನಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳು, ನಾರಿನಾಂಶ, ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇರುತ್ತವೆ. ಇವುಗಳನ್ನು ಮಿತವಾಗಿ ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗಬಹುದು.

ವಾಲ್‌ನಟ್ಸ್‌ನಲ್ಲಿ ಸಸ್ಯಜನ್ಯ ಒಮೆಗಾ-3 ಕೊಬ್ಬಿನಾಮ್ಲವಾದ ಆಲ್ಫಾ-ಲಿನೋಲೆನಿಕ್ ಆಮ್ಲ ಹೇರಳವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ನಿಯಮಿತವಾಗಿ ವಾಲ್‌ನಟ್ಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗಬಹುದು. ಸಮತೋಲಿತ ಆಹಾರದ ಭಾಗವಾಗಿ ಇವುಗಳನ್ನು ಸೇವಿಸುವುದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

ವಾಲ್‌ನಟ್ಸ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇವು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು.

ವಾಲ್‌ನಟ್ಸ್‌ನಲ್ಲಿರುವ ನಾರಿನಾಂಶ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮಲಬದ್ಧತೆ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಉತ್ತಮವಾಗಿರಲು ಇದು ಪೂರಕವಾಗಬಹುದು. ಇದರಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಲು ಸಹಾಯವಾಗಬಹುದು.

ವಾಲ್‌ನಟ್ಸ್‌ನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇದ್ದು, ಆರೋಗ್ಯಕರ ಕೊಬ್ಬು ಮತ್ತು ನಾರಿನಾಂಶ ಇರುತ್ತದೆ. ಇವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಪೂರಕವಾಗಬಹುದು. ಆದರೆ ಇವು ಮಧುಮೇಹಕ್ಕೆ ಔಷಧಿಯಲ್ಲ.